ಶನಿವಾರಸಂತೆ, ನ. ೩: ಸಮೀಪದ ಕಿರಿಕೊಡ್ಲಿ ಮಠದ ಸಮುದಾಯ ಭವನದಲ್ಲಿ ಶನಿವಾರಸಂತೆ-ಕೊಡ್ಲಿಪೇಟೆ ಹೋಬಳಿ ಸರ್ಕಾರಿ ನಿವೃತ್ತ ನೌಕರರ ಸಂಘದ ೨೫ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾನಿಧ್ಯ ವಹಿಸಿದ್ದ ಮಠಾಧೀಶ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ನಿವೃತ್ತಿಯ ನಂತರ ಹಿರಿಯ ಜೀವಗಳು ಸಂಘಟಿತರಾಗಿ ಕಾರ್ಯಕ್ರಮದ ಮೂಲಕ ಒಂದುಗೂಡುವಿಕೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ದೈಹಿಕ-ಮಾನಸಿಕ ನೆಮ್ಮದಿ ನೀಡುವ ಇಂತಹ ಕಾರ್ಯಕ್ರಮಗಳು ಆರೋಗ್ಯದಾಯಕ ಎಂದರು. ಕಾರ್ಯಕ್ರಮದಲ್ಲಿ ಐವರು ಹಿರಿಯ ಸದಸ್ಯರನ್ನು ಸನ್ಮಾನಿಸಿ, ೭ ಮಂದಿ ನೂತನ ಸದಸ್ಯರನ್ನು ಸ್ವಾಗತಿಸಲಾಯಿತು. ಹಿರಿಯ ಸದಸ್ಯ ಸಿ.ಎಲ್. ಸುಬ್ಬಯ್ಯ ಅವರು ತಮ್ಮ ದಿವಂಗತ ಪತ್ನಿ ವನಜಾಕ್ಷಿಯವರ ಸ್ಮರಣಾರ್ಥ ಸದಸ್ಯರಿಗೆ ಬಸ್ ಹುಡುಕಾಟ ಹಾಗೂ ಬಕೆಟ್‌ಗೆ ಬಾಲ್ ಹಾಕುವ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿದ್ದು ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಬಿ. ನಂಜಪ್ಪ ಮಾತನಾಡಿ, ಸರ್ವ ಸದಸ್ಯರ ಸಹಕಾರದಿಂದ ಸಂಘ ೨೫ ವರ್ಷ ಪೂರೈಸಿದೆ. ಮುಂದೆ ಚುನಾಯಿತ ನೂತನ ಆಡಳಿತ ಮಂಡಳಿ ಸಂಘದ ಅಭಿವೃದ್ಧಿಗೆ ಉತ್ಸಾಹದಿಂದ ಶ್ರಮಿಸಲಿ ಎಂದು ಹಾರೈಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಿ.ಬಿ. ಸೋಮಪ್ಪ ಸ್ವಾಗತಿಸಿ, ವಂದಿಸಿದರು. ನಿರ್ದೇಶಕ ಬಿ.ಬಿ. ನಾಗರಾಜ್ ನಿರೂಪಿಸಿ, ಕಾರ್ಯಕ್ರಮ ನಿರ್ವಹಿಸಿದರು.