*ಸಿದ್ದಾಪುರ, ನ. ೩: ಹೊಳೆಮೀನು ಮಾರುಕಟ್ಟೆಯ ಹರಾಜಿನಿಂದ ಸ್ಟಾಲ್ ಗಿಟ್ಟಿಸಿಕೊಂಡ ವ್ಯಾಪಾರಿಯೊಬ್ಬರು ಕಳೆದ ಎಂಟು ತಿಂಗಳಿನಿAದ ಹಣ ಪಾವತಿಸದೆ ವ್ಯಾಪಾರ ಮಾಡುತ್ತಿರುವ ಪ್ರಕರಣ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ೨೦೨೩-೨೪ನೇ ಸಾಲಿಗಾಗಿ ಸಿದ್ದಾಪುರ ಗ್ರಾ.ಪಂ ಹೊಳೆಮೀನು ಮಾರುಕಟ್ಟೆಯ ಹರಾಜು ಪ್ರಕ್ರಿಯೆ ನಡೆಸಿತು. ಹರಾಜಿನಲ್ಲಿ ನೆಲ್ಯಹುದಿಕೇರಿಯ ಹಸನ್ ರೂ. ೩,೨೦,೧೦೦ ಹಾಗೂ ಸಿದ್ದಾಪುರದ ಮುಸ್ತಫಾ ರೂ. ೩,೨೦,೨೦೦ನ್ನು ಸೂಚಿಸಿದರು. ನಿಯಮದಂತೆ ಸ್ಟಾಲ್ ಮುಸ್ತಫಾ ಅವರ ಪಾಲಾಯಿತು. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಇವರಿಬ್ಬರು ಇಎಂಡಿ ಹಣ ತಲಾ ರೂ. ೫೦ ಸಾವಿರವನ್ನು ಪಾವತಿಸಿದ್ದರು.
ಸ್ಟಾಲ್ ಪಡೆದುಕೊಂಡ ಮುಸ್ತಫಾ ಅವರು ನಿಯಮಾನುಸಾರ ವ್ಯಾಪಾರಕ್ಕೂ ಮೊದಲು ತಾವು ಸೂಚಿಸಿದ ರೂ. ೩,೨೦,೨೦೦ನ್ನು ಗ್ರಾ.ಪಂ.ಗೆ ಪಾವತಿಸಬೇಕು. ಆದರೆ ಕಳೆದ ೮ ತಿಂಗಳಿನಿAದ ಒಂದು ರೂಪಾಯಿಯನ್ನೂ ಪಾವತಿಸದೆ ಇವರು ವ್ಯಾಪಾರ ಮಾಡಿದ್ದಾರೆ. ಈ ಮಾಹಿತಿ ಗ್ರಾ.ಪಂ.ಗೆ ಇದ್ದರೂ ಜಾಣಮೌನ ವಹಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಮುಸ್ತಫಾ ನಿಯಮ ಉಲ್ಲಂಘಿಸಿರುವ ಹಿನ್ನೆಲೆ ನೆಲ್ಲಿಹುದಿಕೇರಿಯ ಹಸನ್ ಅವರು ತಾನು ಸೂಚಿಸಿರುವ ಹಣ ರೂ. ೩,೨೦,೧೦೦ನ್ನು ಪಾವತಿಸುತ್ತೇನೆ, ವ್ಯಾಪಾರ ಮಾಡಲು ಸ್ಟಾಲ್‌ಅನ್ನು ನನಗೆ ಬಿಟ್ಟುಕೊಡಿ ಎಂದು ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಗ್ರಾ.ಪಂ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಪ್ರಕರಣ ಪೊನ್ನಂಪೇಟೆ ತಾ.ಪಂ. ಮೆಟ್ಟಿಲೇರಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಅವರು ಸಿದ್ದಾಪುರ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.
ಈ ಸಂದರ್ಭ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಮುಂದಿನ ಮೂರು ದಿನಗಳೊಳಗೆ ನಿಯಮಾನುಸಾರ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರಕರಣದ ಕುರಿತು ತನಿಖೆ ಕೈಗೊಳ್ಳುವುದಾಗಿ ತಿಳಿಸಿದರು. ಗ್ರಾ.ಪಂ ಕಾರ್ಯದರ್ಶಿ ಮೋಹನ್ ಹಾಗೂ ಅಭಿವೃದ್ಧಿ ಅಧಿಕಾರಿ ಶಫೀಕ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. - ಅಂಚೆಮನೆ ಸುಧಿ