ಕೂಡಿಗೆ, ನ. ೫: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ೧೦ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಯನ್ನು ತೆಗೆಯಲು ರೈತರು ಹೈರಾಣಾಗಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯು ಹೆಚ್ಚು ಅರೆ ಮಲೆನಾಡು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಈಗಾಗಲೇ ರೈತರು ಮಳೆಯನ್ನೇ ಅವಲಂಭಿಸಿ ಮೆಕ್ಕೆಜೋಳದ ಬೆಳೆಯನ್ನು ಬೆಳೆದಿದ್ದಾರೆ. ಆದರೆ ಈ ಬಾರಿ ಮೆಕ್ಕೆಜೋಳ ಬಿತ್ತನೆ ಸಂದರ್ಭದಲ್ಲಿ ಮಳೆ ಬಾರದೆ ಬೆಳೆಯು ಸಮರ್ಪಕವಾಗಿ ಬಂದಿರುವುದಿಲ್ಲ. ಬಂದ ಸಾಧಾರಣ ಪ್ರಮಾಣದ ಬೆಳೆಯನ್ನು ಕಟಾವು ಮಾಡುವ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದಾಗಿ ಭಾರಿ ತೊಂದರೆಗಳು ಆಗುತ್ತಿವೆ.

೮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦ ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಈ ಬಾರಿ ಮೆಕ್ಕೆಜೋಳವನ್ನು ಬೆಳೆಯಲಾಗಿದೆ. ಆದರೆ, ಜಮೀನಿನಲ್ಲಿ ಕಡಿದ ಮೆಕ್ಕೆಜೋಳ ಬೆಳೆಯನ್ನು ಸಾಗಾಟ ಮಾಡಲು ಮಳೆಯಿಂದಾಗಿ ಜಮೀನಿಗೆ ತೆರಳಿದ ಟ್ರಾಕ್ಟರ್ ಹೂತುಹೋಗುವ ಪ್ರಸಂಗ ಎದುರಾಗುತ್ತಿದೆ. ಅಲ್ಲದೆ ಜೋಳದ ಮೊತ್ತೆಗಳನ್ನು ಒಣಗಿಸಿ ನಂತರ ಜೋಳವನ್ನು ಮಾರಾಟ ಮಾಡಲು ಸಹ ಮಳೆಯಿಂದಾಗಿ ಈ ಭಾಗದ ರೈತರಿಗೆ ಅನಾನುಕೂಲ ಉಂಟಾಗಿದೆ.

ಚೇತರಿಕೆ ಕಂಡ ಮೆಕ್ಕೆಜೋಳದ ಬೆಲೆ: ಕಳೆದ ತಿಂಗಳಲ್ಲಿ ಮೆಕ್ಕೆಜೋಳದ ಬೆಲೆಯು ೧,೫೦೦ ರೂ.ಗಳಷ್ಟಿತ್ತು. ಇದೀಗ ಜೋಳ ಬೆಲೆ ೨೦೦೦ ರೂ. ಗಳಿಗೆ ಏರಿಕೆಯಾಗಿರುವ ಮೂಲಕ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡುಕೊAಡಿದೆ. ಅದರಿಂದಾಗಿ ಈ ವ್ಯಾಪ್ತಿಯ ರೈತರು ಮೆಕ್ಕೆಜೋಳ ಖರೀದಿದಾರರಿಗೆ ಮಾರಾಟ ಮಾಡುವಲ್ಲಿ ಸಿದ್ಧರಾಗುತ್ತಿದ್ದಾರೆ.