ಕೋವರ್‌ಕೊಲ್ಲಿ ಇಂದ್ರೇಶ್
ಮಡಿಕೇರಿ, ನ. ೫ : ಜಿಲ್ಲಾ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯು ಕೊಡಗಿನ ೧೧ ಪುರಾತನ ಸ್ಥಳಗಳನ್ನು ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ರೀತಿ ರಾಜ್ಯದಲ್ಲಿ ಒಟ್ಟು ೧೮೧ ಸ್ಮಾರಕಗಳನ್ನು ಸಂರಕ್ಷಿತ ಪಟ್ಟಿಗೆ ಸೇರಿಸಲು ಯೋಜಿಸಲಾಗಿದೆ.
ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ ೧೯೬೧ ಹಾಗೂ ೧೯೬೫ರ ನಿಯಮಗಳ ಅನ್ವಯ ಘೋಷಣೆಗಾಗಿ ರಕ್ಷಣೆ ಇಲ್ಲದ ಸ್ಮಾರಕಗಳ ಕಂದಾಯ ದಾಖಲೆ-ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ದಾಖಲೆಗಳು ದೊರೆತ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಪುರಾತತ್ವ ಮತ್ತು ಕಲಾತ್ಮಕ ಆಸ್ಥೆಯುಳ್ಳಂತಹ ಮತ್ತು ನೂರು ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ಅಸ್ತಿತ್ವದಲ್ಲಿರುವಂತಹ ಯಾವುದೇ ರಚನೆ, ನಿರ್ಮಿತಿ, ಸ್ಮಾರಕ ಅಥವಾ ಯಾವುದೇ ಸಮಾಧಿ ದಿಬ್ಬ, ಹೂಳುವ ಸ್ಥಳ, ಗುಹೆ, ಶಿಲಾಶಿಲ್ಪ, ಶಾಸನ ಮತ್ತು ಏಕಶಿಲೆ ಇತ್ಯಾದಿಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಬಹುದಾಗಿದೆ.
ಕೊಡಗಿನ ಪುರಾತತ್ವ ಇಲಾಖೆಯಿಂದ ಹೊಸದಾಗಿ ಶಿಫಾರಸು ಮಾಡಲಾಗಿರುವ ಪುರಾತನ ಸ್ಥಳಗಳೆಂದರೆ ಮಡಿಕೇರಿ ತಾಲೂಕಿನಲ್ಲಿರುವ ಕಾಂತೂರಿನ ಪ್ರಾಚೀನ ಅರಮನೆ, ಸೋಮವಾರಪೇಟೆ ತಾಲೂಕಿನ ಅಂಜನಗೇರಿ ಬೆಟಗೇರಿಯಲ್ಲಿರುವ ಜೈನ ಬಸದಿ, ಮೋರಿಕಲ್ಲಿನಲ್ಲಿರುವ ಶಿಲಾ ಸಮಾಧಿಗಳು, ತಲ್ತರೆ ಶೆಟ್ಟಳ್ಳಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯ, ದೊಡ್ಡ ಕಣಗಾಲು ಗ್ರಾಮದ ಜೈನ ಬಸದಿ, ದೊಡ್ಡಮಳ್ತೆ ಗ್ರಾಮದ ಶ್ರೀ ಸಿದ್ದೇಶ್ವರ ದೇವಾಲಯ, ಬಸವೇಶ್ವರ ದೇವಾಲಯ (ಬಿಳಿಗೇರಿ ಬಸವಣ್ಣ) ಮತ್ತು ಕುಶಾಲನಗರ ತಾಲೂಕಿನ ಹೊಸಪಟ್ಟಣದಲ್ಲಿರುವ ಶ್ರೀ ಸೋಮೇಶ್ವರ ಸ್ವಾಮಿಗಳ ಗದ್ದುಗೆ (ಗುತ್ತಿ ಮಠ), ನಂಜರಾಯಪಟ್ಟಣದ ಶ್ರೀ ವೀರಭದ್ರ ದೇವಾಲಯ, ಉಂಡೂರು ಕಾಡುವಿನಲ್ಲಿರುವ ದೇವಾಲಯ ಮತ್ತು ಹೆಬ್ಬಾಲೆ ಗ್ರಾಮದಲ್ಲಿರುವ ಮಂಟಪಗಳನ್ನು ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗಿದೆ ಎಂದು ಮಡಿಕೇರಿ ಪುರಾತತ್ವ ಇಲಾಖೆಯ ಕ್ಯೂರೇಟರ್ ರೇಖಾ ಅವರು ತಿಳಿಸಿದ್ದಾರೆ.
ಅವಜ್ಞೆಗೆ ತುತ್ತಾಗಿರುವ ಅನೇಕ ರಕ್ಷಣೆ ಇಲ್ಲದ ಸ್ಮಾರಕಗಳು ಹಾಗೂ ಇತರೆ ಪ್ರಾಚ್ಯಾವಶೇಷಗಳನ್ನು ಗ್ರಾಮವಾರು ಸರ್ವೆ ಕಾರ್ಯದ ಮೂಲಕ ಗುರುತಿಸಲಾಗುತ್ತಿದೆ. ಈ ಸಮೀಕ್ಷೆಯ ಆಧಾರದಲ್ಲಿ ಹೊಸದಾಗಿ ಅಧಿಸೂಚನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಸಂರಕ್ಷಿತ ಸ್ಮಾರಕಗಳು ಎಂದು ಘೋಷಣೆಯಾದಲ್ಲಿ ಸಂರಕ್ಷಣೆಗೆ ಅನುಕೂಲವಾಗಲಿದೆ. ಕಾನೂನಿನ ಬಲವೂ ಇರುತ್ತದೆ. ನಮ್ಮ ಸ್ಮಾರಕಗಳ ದತ್ತು ಕಾರ್ಯಕ್ರಮದಡಿ ನಿರ್ವಹಣೆಗೆ ದತ್ತು ಕೊಡುವುದಕ್ಕೂ ಸಹಕಾರಿಯಾಗಲಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶಿಫಾರಸು ಮಾಡುತ್ತಿರುವುದು ಇದೇ ಮೊದಲಾಗಿದ್ದು ಈ ಹಿಂದೆ ಇಡೀ ರಾಜ್ಯದಿಂದ ೧೦ ರಿಂದ ೧೫ ಸ್ಮಾರಕಗಳನ್ನು ಶಿಫಾರಸು ಮಾಡಲಾಗಿತ್ತು.
ಪ್ರಸ್ತುತ ಜಿಲ್ಲೆಯ ರಾಜಾಸೀಟ್, ಮಡಿಕೇರಿ ಕೋಟೆ, ಮುಳ್ಳೂರಿನ ಜೈನ ಬಸದಿ ಮತ್ತು ಸುಳಿಮಳ್ತೆ ಮತ್ತು ದೊಡ್ಡಮಳ್ತೆಯ ಶಿಲಾ ಸಮಾಧಿ, ಮಂಟಪಗಳು ಕೇಂದ್ರ ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿವೆ. ಯುವಕಪಾಡಿಯ ನಾಲ್ಕು ನಾಡು ಅರಮನೆ ಮತ್ತು ರಾಜರ ಗದ್ದುಗೆಗಳು ರಾಜ್ಯ ಸರ್ಕಾರದ ಪುರಾತತ್ವ ಇಲಾಖೆಯ ಪಟ್ಟಿಯಲ್ಲಿವೆ.