ಮಹಿಳಾ ಅಧಿಕಾರಿ ಬರ್ಬರ ಹತ್ಯೆ

ಬೆಂಗಳೂರು, ನ. ೫: ರಾಜಧಾನಿ ಬೆಂಗಳೂರಿನಲ್ಲಿ ಹೈಪ್ರೊಫೈಲ್ ಅಪರಾಧ ಕೃತ್ಯವೊಂದು ಬೆಳಕಿಗೆ ಬಂದಿದೆ. ಗಣಿ-ಭೂವಿಜ್ಞಾನ ಇಲಾಖೆಯ ಅಧಿಕಾರಿಯ ಮನೆಗೆ ದುಷ್ಕರ್ಮಿಗಳು ನುಗ್ಗಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಣಿ-ಭೂವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ (೩೭) ಕೊಲೆಯಾದ ಅಧಿಕಾರಿ. ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಅಧಿಕಾರಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತç ವಿಭಾಗದ ಹಿರಿಯ ಅಧಿಕಾರಿಯಾಗಿ ಪ್ರತಿಮಾ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿಮಾ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಪತಿ ಮತ್ತು ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ. ಕಳೆದ ರಾತ್ರಿ ಈ ಕೃತ್ಯ ನಡೆದಿದೆ.

ತನಿಖೆ ಮಾಡುತ್ತೇವೆ-ಸಿಎಂ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ (೩೭) ಕೊಲೆ ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಈಗಷ್ಟೇ ಮಾಹಿತಿ ತಿಳಿಯಿತು. ಅವರು ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಒಬ್ಬಂಟಿ ಯಾಗಿ ವಾಸಿಸುತ್ತಿದ್ದು ಅವರ ಪತಿ ಪರವೂರಿನಲ್ಲಿದ್ದರಂತೆ. ಅವರ ಕೊಲೆ ಹೇಗಾಯ್ತು, ಯಾಕಾಯ್ತು ಎಂದು ತನಿಖೆ ಮಾಡಿಸಲಾಗುವುದು ಎಂದರು.

ಸಚಿನ್‌ರ ಅತ್ಯಧಿಕ ಶತಕಗಳ ದಾಖಲೆ ಸರಿಗಟ್ಟಿದ ಕೊಹ್ಲಿ

ಕೋಲ್ಕತ್ತಾ, ನ. ೫: ಭಾರತದ ರನ್‌ಮೆಷಿನ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಏಕದಿನ ವೃತ್ತಿಜೀವನದ ೪೯ನೇ ಶತಕವನ್ನು ಗಳಿಸಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆಫ್ರಿಕನ್ ತಂಡದ ವಿರುದ್ಧ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಅಮೋಘ ಶತಕದ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ವಿಶೇಷವೆಂದರೆ ಅವರು ತಮ್ಮ ೩೫ನೇ ಹುಟ್ಟುಹಬ್ಬದಂದು ಈ ಸಾಧನೆ ಮಾಡಿದ್ದಾರೆ. ಸಚಿನ್ ತಮ್ಮ ಒನ್‌ಡೆ ವೃತ್ತಿಜೀವನದಲ್ಲಿ ೪೬೩ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ೪೫೨ ಇನ್ನಿಂಗ್ಸ್ಗಳಲ್ಲಿ ೧೮,೪೨೬ ರನ್ ಸಿಡಿಸಿದ್ದಾರೆ. ಅವರ ಸರಾಸರಿ ೪೪.೮೩ ಆಗಿತ್ತು. ಸಚಿನ್ ೪೯ ಶತಕ ಮತ್ತು ೯೬ ಅರ್ಧ ಶತಕ ಗಳಿಸಿದ್ದಾರೆ. ವಿರಾಟ್ ತಮ್ಮ ೨೭೭ನೇ ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ೪೯ನೇ ಓವರ್‌ನಲ್ಲಿ ಕೊಹ್ಲಿ ೪೯ನೇ ಶತಕ ಪೂರೈಸಿದರು. ೪೯ ಶತಕಗಳ ದಾಖಲೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡೂಲ್ಕರ್ ಹೊಗಳಿದ್ದಾರೆ. ಟ್ವಿಟರ್‌ನಲ್ಲಿ ಬರೆದು ಕೊಂಡಿರುವ ಅವರು, ವಿರಾಟ್ ನೀವು ಚೆನ್ನಾಗಿ ಆಡಿದ್ದೀರಿ. ೪೯ ರಿಂದ ೫೦ ಶತಕ ತಲುಪಲು ನನಗೆ ೩೬೫ ದಿನಗಳು ಬೇಕಾಯಿತು. ಮುಂದಿನ ದಿನಗಳಲ್ಲಿ ನೀವು ೪೯ ರಿಂದ ೫೦ಕ್ಕೆ ತಲುಪುತ್ತೀರಿ ಮತ್ತು ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ರಾಮಲಲ್ಲಾ ಪ್ರತಿಷ್ಠಾಪನೆ ಪ್ರಕ್ರಿಯೆಗೆ ಚಾಲನೆ

ಅಯೋಧ್ಯೆ, ನ. ೫: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅಕ್ಷತೆ ಪೂಜೆಯ ಮೂಲಕ ಪ್ರತಿಷ್ಠಾಪನೆ ಪ್ರಕ್ರಿಯೆಗಳ ತಯಾರಿಗೆ ಇಂದು ಚಾಲನೆ ದೊರೆತಿದೆ. ರಾಮ ದರ್ಬಾರ್‌ನಲ್ಲಿ ೧೦೦ ಕ್ವಿಂಟಾಲ್ ನಷ್ಟು ಅಕ್ಷತೆಗೆ ಪೂಜೆ ಸಲ್ಲಿಸಲಾಗಿದ್ದು, ಅಕ್ಕಿಗೆ ಅರಿಶಿನ ಹಾಗೂ ದೇಸಿ ತುಪ್ಪ ಮಿಶ್ರಣ ಮಾಡುವ ಮೂಲಕ ಅಕ್ಷತೆಯನ್ನು ತಯಾರಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ. ದೇಶದ ೪೫ ಸಂಘಟನಾ ಪ್ರಾಂತ್ಯಗಳಿAದ ಅಯೋಧ್ಯೆಗೆ ಆಗಮಿಸಿರುವ ೯೦ ಪ್ರಮುಖ ಪದಾಧಿಕಾರಿಗಳಿಗೆ ಈ ಅಕ್ಷತೆಯನ್ನು ವಿತರಣೆ ಮಾಡಲಾಗುತ್ತದೆ. ಬಳಿಕ ವಿಹೆಚ್‌ಪಿಯ ಸದಸ್ಯರು ಈ ಅಕ್ಷತೆಯನ್ನು ಜ.೨೨ಕ್ಕೂ ಮುನ್ನ ದೇಶಾದ್ಯಂತ ವಿತರಣೆ ಮಾಡಲಿದ್ದಾರೆ.

ಮಹಿಳೆ, ಇಬ್ಬರು ಮಕ್ಕಳು, ಅತ್ತೆ ಆತ್ಮಹತ್ಯೆ ; ಬಂಧನ

ಪಾಲನ್ಪುರ, ನ. ೫: ಗುಜರಾತ್ನ ಬನಸ್ಕಾಂತ ಜಿಲ್ಲೆಯ ಪಾಲನ್ಪುರದಲ್ಲಿ ೩೦ ವರ್ಷದ ಮಹಿಳೆ, ಆಕೆಯ ಇಬ್ಬರು ಮಕ್ಕಳು ಮತ್ತು ೫೫ ವರ್ಷದ ಅತ್ತೆ ಅಣೆಕಟ್ಟೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಸಂಜೆ ಈ ದಾರಣ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ತಮ್ಮ ಪತಿಯಂದಿರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ನಯನಾ ಚೌಹಾಣ್ ಮತ್ತು ಆಕೆಯ ಅತ್ತೆ ಕನುಬಾ ಚೌಹಾಣ್ ಅವರು ತಮ್ಮ ಪತಿಯಂದಿರಾದ ನರಸಿಂಹ ಮತ್ತು ಗೆನ್ಸಿನ್ಹ್ ಚೌಹಾಣ್ ಅವರ ನಿರಂತರ ಚಿತ್ರಹಿಂಸೆ ಮತ್ತು ಕಿರುಕುಳದಿಂದಾಗಿ ಈ ತೀವ್ರವಾದ ಕ್ರಮ ತೆಗೆದು ಕೊಂಡಿದ್ದಾರೆ ಎಂದು ಪಾಲನ್ಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎವಿ ದೇಸಾಯಿ ಹೇಳಿದ್ದಾರೆ. ನಯನಾ ಅವರ ಸಹೋದರ ಪ್ರವಿನ್ಸಿನ್ಹ್ ವಘೇಲಾ ಅವರ ದೂರಿನ ಆಧಾರದ ಮೇಲೆ, ನರಸಿಂಹ ಮತ್ತು ಗೆನ್ಸಿನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಹಲ್ಲೆ ಮತ್ತು ಇತರ ಅಪರಾಧಗಳಿಗಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಗೆನ್ಸಿನ್‌ನನ್ನು ಬಂಧಿಸಲಾಗಿದ್ದು, ನರಸಿಂಹ ಪರಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಇಬ್ಬರು ವಲಸೆ ಕಾರ್ಮಿಕರ ಬರ್ಬರ ಹತ್ಯೆ

ಕೊಚ್ಚಿ, ನ. ೫: ಕೇರಳದ ಎರ್ನಾಕುಲಂನ ಮುವಾಟ್ಟುಪುಳದ ಕಂಪಾನಿಪಾಡಿಯಲ್ಲಿ ಭಾನುವಾರ ಮಧ್ಯಾಹ್ನ ಟಿಂಬರ್ ಯಾರ್ಡ್ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಅಸ್ಸಾಂ ಮೂಲದ ಮೊಹಂತೋ ಮತ್ತು ದೆಪ್ಪಾಶಂಕರ್ ಬಸುಮ್ಮ ಎಂದು ಗುರುತಿಸಲಾಗಿದೆ. ಸಂಜೆ ೪ ಗಂಟೆ ಸುಮಾರಿಗೆ ಇಬ್ಬರ ಮೃತದೇಹಗಳನ್ನು ಅವರ ಸಹೋದ್ಯೋಗಿಗಳು ನೋಡಿದ್ದಾರೆ. ಇಬ್ಬರೂ ಒಂದೇ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ನಂತರ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಮತ್ತು ಅವರ ಆಪ್ತ ಸ್ನೇಹಿತ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಶಂಕೆ ವ್ಯಕ್ತವಾಗಿದ್ದು, ನಿನ್ನೆ ರಾತ್ರಿಯೇ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬAಡೀಪುರ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ: ಓರ್ವ ಬೇಟೆಗಾರ ಸಾವು

ಮೈಸೂರು, ನ. ೫: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಬೇಟೆಗಾರ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮೃತನನ್ನು ಭೀಮನಬೀಡು ಗ್ರಾಮದ ನಿವಾಸಿ ಮನು (೩೫) ಎಂದು ಗುರುತಿಸಲಾಗಿದೆ .ಮದ್ದೂರು ಅರಣ್ಯ ವಲಯದಲ್ಲಿ ಕಡವೆ, ಕಾಡು ಹಂದಿಗಳನ್ನು ಬೇಟೆಯಾಡಲು ೮-೧೦ ಜನರ ಗುಂಪು ಬಂದಿತ್ತು ಎನ್ನಲಾಗಿದೆ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದರು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ನಾಡ ಬಂದೂಕುಗಳಿAದ ಕಳ್ಳಬೇಟೆಗೆ ಬಂದ ಗುಂಪು ದಾಳಿ ಮಾಡಲು ಮುಂದಾಗಿತ್ತು. ತಕ್ಷಣವೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಮರು ದಾಳಿಗೆ ಮುಂದಾಗಿದ್ದು ಈ ವೇಳೆ ಬೇಟೆಗೆ ಬಂದ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಂಡೀಪುರ ಸಿಎಫ್‌ಓ ರಮೇಶ್ ಕುಮಾರ್ ತಿಳಿಸಿದ್ದಾರೆ. ಘಟನೆ ನಡೆದ ಬಳಿಕ ಉಳಿದ ಬೇಟೆಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ಬಲೆ ಬೀಸಿದ್ದಾರೆ.