ನಾಪೋಕ್ಲು, ನ. ೫: ಅಧಿಕ ಸಂಖ್ಯೆಯ ಕ್ರೀಡಾಪಟುಗಳನ್ನು ತರಬೇತುಗೊಳಿಸಿ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕೊಡಗು ಬ್ಯಾಡ್ಮಿಂಟನ್ ಅಸೋಸಿಯೇಷನ್ ಉದ್ದೇಶ ಎಂದು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಹೇಳಿದರು.
ದಿ ರೋವ್ ಕೂರ್ಗ್ ನಾಪೋಕ್ಲು ಮತ್ತು ರಘುರಾಜ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ವತಿಯಿಂದ ದಿ ರೋವ್ ಕೂರ್ಗ್ ನಾಪೋಕ್ಲುವಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಘಟಕವಾಗಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿ ಗಳನ್ನು ತರಬೇತುಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಇದೀಗ ನಾಪೋಕ್ಲುವಿನಲ್ಲಿ ಬ್ಯಾಡ್ಮಿಂಟನ್ ತರಬೇತಿಗಾಗಿ ವಿದ್ಯಾರ್ಥಿಗಳಿಗೆ ಅವಕಾಶ ಲಭಿಸಿದೆ. ಇದು ವ್ಯಾವಹಾರಿಕವಾಗಿ ಮಾಡಿದ್ದಲ್ಲ. ಈಜು ಹಾಗೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಲು ಕೈಗೊಂಡ ಕಾರ್ಯವಾಗಿದೆ ಎಂದರು.
ಅAಕುರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರತ್ನ ಚರ್ಮಣ ಮಾತನಾಡಿ ಸ್ಥಳೀಯ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಿದೆ ಎಂದರು.
ತರಬೇತುದಾರ ರಘುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಮಂಡೀರ ಜಯ ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಲೀಕ ಮಂಡೀರ ಸರೋಜ ದೇವಯ್ಯ, ಕೊಡವ ಹಾಕಿ ಅಕಾಡೆಮಿ ನಿರ್ದೇಶಕ ಕುಲ್ಲೇಟಿರ ಅರುಣ್ ಬೇಬ, ಕಾಫಿ ಬೆಳೆಗಾರರಾದ ಬಿದ್ದಾಟಂಡ ಜೀವನ್ ಕಾರ್ಯಪ್ಪ, ಸರ್ವೆ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಕೇಟೋಳಿರ ಕುಟ್ಟಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶಸ್ವಿ ಮತ್ತು ದೇಶಿಕ ಪ್ರಾರ್ಥಿಸಿ, ಮಂಡೀರ ಶೃತಿ ಕಾವೇರಮ್ಮ ಸ್ವಾಗತಿಸಿ, ಬಾಳೆಯಡ ದಿವ್ಯ ಕಾರ್ಯಕ್ರಮ ನಿರೂಪಿಸಿ ಮುಕ್ಕಾಟಿರ ವಿನಯ್ ವಂದಿಸಿದರು.