ಸಿದ್ದಾಪುರ, ನ. ೫: ರಾಜ್ಯದಲ್ಲಿ ನಿಷೇಧಿತ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಿದ್ದಾಪುರದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾಡಗ ಬಾಣಂಗಲ ಗ್ರಾಮದ ನಿವಾಸಿ ತಂಗಚ್ಚ ಎ.ಎಂ. ಬಂಧಿತ ಆರೋಪಿ. ಬಾಡಗ ಬಾಣಂಗಳ ಗ್ರಾಮದ ಮಾರ್ಗೊಳಿ ಕಾಫಿ ತೋಟದ ಬಸ್ ನಿಲ್ದಾಣದ ಬಳಿ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಪೊಲೀಸರು ದಾಳಿ ನಡೆಸಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದರು. ಆತನ ಬಳಿ ಇದ್ದ ಕೇರಳ ರಾಜ್ಯದ ೧೪೮ ಲಾಟರಿ ಟಿಕೆಟ್ ಹಾಗೂ ನಗದು ರೂ. ೩೬೦ ಅನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ಜಗದೀಶ್ ಹಾಗೂ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ರವರ ನೇತೃತ್ವದಲ್ಲಿ ಸಿದ್ದಾಪುರ ಠಾಣಾಧಿಕಾರಿಗಳಾದ ರಾಘವೇಂದ್ರ, ಶಿವಣ್ಣ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.