ಸೋಮವಾರಪೇಟೆ, ನ. ೪: ಕಳೆದ ಕೆಲ ದಿನಗಳಿಂದ ಮೋಡ ಮುಸುಕಿದ ವಾತಾ ವರಣವಿರುವ ಸೋಮ ವಾರಪೇಟೆ ವ್ಯಾಪ್ತಿಯಲ್ಲಿ ಇಂದು ಸಂಜೆ ವೇಳೆಗೆ ಭರ್ಜರಿ ಮಳೆ ಸುರಿಯಿತು.

ನಿನ್ನೆ ಸಂಜೆ ಮತ್ತು ರಾತ್ರಿ ಕೆಲ ನಿಮಿಷಗಳ ಕಾಲ ಮಳೆ ಸುರಿದಿದ್ದರೆ, ಇಂದು ಬೆಳಿಗ್ಗೆ ದಟ್ಟಮೋಡದೊಂದಿಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಸಂಜೆ ೪ ಗಂಟೆ ವೇಳೆಗೆ ಪಟ್ಟಣದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಕೆಲಕಾಲ ಜನ ಸಂಚಾರ ಸ್ತಬ್ಧವಾಗಿತ್ತು.

ಭಾರೀ ಮಳೆ ಹಿನ್ನೆಲೆ ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯಾ ಗಿತ್ತು. ವಿವೇಕಾನಂದ ವೃತ್ತದಿಂದ ಕನ್ನಡಾಂಬೆ ಸರ್ಕಲ್‌ವರೆಗಿನ ರಸ್ತೆ ಬದಿಯಲ್ಲಿ ಹಲವಷ್ಟು ಅಂಗಡಿ ಮುಂಗಟ್ಟುಗಳು ತಲೆಎತ್ತಿದ್ದು, ಈ ಅಂಗಡಿಗಳ ಪೈಕಿ ಕೆಲ ಅಂಗಡಿಯವರು ಚರಂಡಿಯ ಮೇಲ್ಭಾಗವೇ ವ್ಯಾಪಾರ ವಹಿವಾಟು ನಡೆಸಿದರು.

ಇದರೊಂದಿಗೆ ಚರಂಡಿಯನ್ನು ತ್ಯಾಜ್ಯಗಳಿಂದ ಮುಚ್ಚಿರುವ ಹಿನ್ನೆಲೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಸಾರ್ವಜನಿಕ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ. ಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು, ತ್ಯಾಜ್ಯಗಳು ರಸ್ತೆಯ ತುಂಬೆಲ್ಲಾ ಹರಡಿ ಸಂಚಾರಕ್ಕೆ ಅಡಚಣೆಯಾಗಿದ್ದು, ಪಟ್ಟಣ ಪಂಚಾಯಿತಿ ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.