ಸೋಮವಾರಪೇಟೆ, ನ. ೬ : ಶಿಥಿಲಾವಸ್ಥೆಯಲ್ಲಿರುವ ಕಕ್ಕೆಹೊಳೆ ಸೇತುವೆಯಲ್ಲಿ ಅವಘಡ ನಡೆಯುವ ಮುನ್ನೆಚ್ಚರಿಕೆಯಾಗಿ ಲೋಕೋಪಯೋಗಿ ಇಲಾಖೆಯು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ೪ ತಿಂಗಳು ಕಳೆದರೂ ಈವರೆಗೆ ಸೇತುವೆ ಕಾಮಗಾರಿ ಆರಂಭಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಕ್ಕೆಹೊಳೆಯ ಹಳೆ ಸೇತುವೆಯು ಸೋಮವಾರಪೇಟೆಯಿಂದ ಹಾನಗಲ್ಲು, ಕಿರಗಂದೂರು, ಬಗ್ಗನ ಮನೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿರುವ ಸೇತುವೆಯನ್ನು ದುರಸ್ತಿಗೊಳಿಸಲು ಇಲಾಖೆ ಈವರೆಗೆ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಈ ಪ್ರದೇಶದಲ್ಲಿ ಹಲವಷ್ಟು ಅವಘಡಗಳು ಸಂಭವಿಸುತ್ತಿದ್ದು, ತಕ್ಷಣ ದುರಸ್ತಿ ಕಾರ್ಯ ಆರಂಭಿಸುವAತೆ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.
ಸುಮಾರು ೫ ದಶಕಗಳಿಗೂ ಹಳೆಯದಾದ ಸೇತುವೆಯು ಕಳೆದ ಮಳೆಯ ಸಂದರ್ಭ ಶಿಥಿಲಗೊಂಡು ಸಂಚಾರ ನಿರ್ಬಂಧಿಸಲಾಗಿದೆ. ಭಾರದ ಸರಕು ವಾಹನಗಳು ಚಲಿಸುವ ದಾರಿ ಇದಾಗಿದ್ದು ಜಾಗೃತಿ ದೃಷ್ಟಿಯಿಂದ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಿ, ಈಗಾಗಲೇ ೪ ತಿಂಗಳು ಕಳೆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ಇದನ್ನು ಸರಿಪಡಿಸುವ ಅಥವಾ ಹೊಸ ಸೇತುವೆ ನಿರ್ಮಾಣದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಖಂಡನೀಯ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸೇತುವೆಯು ಸರ್ಕಾರಿ ಕಚೇರಿಗಳು, ದೇವಾಲಯ, ಆಸ್ಪತ್ರೆ, ಶಾಲೆಗಳು ಮತ್ತು ಹಲವಾರು ಹಳ್ಳಿಗಳಿಗೆ ಸಂಪರ್ಕ ಸೇತುವಾಗಿದೆ.. ಈ ಸೇತುವೆಯ ಬಳಿ ಈಗಾಗಲೇ ಹಲವಾರು ಅಪಘಾತಗಳು ನಡೆದಿದ್ದು ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಇದು ಸೂಕ್ಷö್ಮ ಸ್ಥಳವಾಗಿದ್ದು, ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನಗಳು ಸಂಚರಿಸುತ್ತಿದ್ದು, ಈಗಾಗಲೇ ಅಪಘಾತದಿಂದ ನಾಲ್ಕೆöÊದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಮನೆಯಿಂದ ಕೂಗಳತೆ ದೂರದಲ್ಲಿ ಮುಖ್ಯ ಸೇತುವೆ ಹಾದುಹೋಗಿದೆ. ಶಾಸಕರು, ಅಧಿಕಾರಿಗಳೂ ಸಹ ಅನೇಕ ಬಾರಿ ಈ ಪ್ರದೇಶದಲ್ಲಿ ಸಂಚರಿಸಿದ್ದಾರೆ. ಆದರೂ ಈವರೆಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಶಾಸಕರು ಮತ್ತು ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ಒಂದು ತಿಂಗಳ ಒಳಗೆ ಕಾಮಗಾರಿ ಪ್ರಾರಂಭವಾಗದಿದ್ದಲ್ಲಿ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ನಗರ ಘಟಕದ ಅಧ್ಯಕ್ಷ ಮಂಜುನಾಥ್, ಚಂದ್ರು, ಬಿ.ವಿ. ರವಿ, ರೂಪಾ, ಸುನಂದ, ಸುಮತಿ, ಮಹಮ್ಮದ್ ಶಾಫಿ, ಆದರ್ಶ್ ತಿಮ್ಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಸಂಬAಧಿತ ಮನವಿಯನ್ನು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ನಾಯಕ್, ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರುಗಳಿಗೆ ಸಲ್ಲಿಸಲಾಯಿತು.