ಬೆಂಗಳೂರು, ನ. ೬: ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಅಂಗನವಾಡಿಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ಜಿಲ್ಲೆಯ ಅಧಿಕಾರಿಗಳಿಗೆ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು ಅವರು ಸೂಚನೆ ನೀಡಿದ್ದಾರೆ.

ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಅಂಗನವಾಡಿಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ ಎನ್ನುವ ಮಾಧ್ಯಮಗಳ ವರದಿಯ ನಂತರ ಸಚಿವರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ವಿದ್ಯುತ್ ಸಂಪರ್ಕ ಕಡಿತ ಗೊಳಿಸಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ವಿದ್ಯುತ್ ಇಲಾಖೆಯ ಅಧಿಕಾರಿ ಗಳೊಂದಿಗೆ ಹಾಗೂ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಸಚಿವರ ಕಾರ್ಯಾಲಯಕ್ಕೂ ಸೂಚನೆ ನೀಡಿದ್ದರು. ಸೂಚನೆಯ ಹಿನ್ನೆಲೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರಪ್ಪ ಹಂಚಿನಾಳ ಅವರು ಜಿಲ್ಲೆಯ ಅಧಿಕಾರಿಗಳು, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಮಾತನಾಡಿ ಅಂಗನವಾಡಿಗಳ ವಿದ್ಯುತ್ ಸಂಪರ್ಕವನ್ನು ಮರು ಸ್ಥಾಪಿಸಲು ಕ್ರಮ ಕೈಗೊಂಡಿದ್ದಾರೆ.