ಸೋಮವಾರಪೇಟೆ, ನ. ೮: ಕಳೆದ ೬ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ೮ ದಿನಗಳ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಮಾದಾಪುರದಲ್ಲಿ ನಡೆದಿದೆ.
ಮಾದಾಪುರದಲ್ಲಿ ವೆಲ್ಡಿಂಗ್ ಹಾಗೂ ಮರಗೆಲಸ ಮಾಡಿಕೊಂಡಿದ್ದ ಎ.ಟಿ. ರಾಜ ಅವರ ಪುತ್ರ ರಂಜಿತ್(೨೩) ಮೃತ ದುರ್ದೈವಿ. ರಂಜಿತ್ ಮತ್ತು ಪತ್ನಿ ಕರೀಶ್ಮಾ ಅವರುಗಳು ಮಾದಾಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಕಳೆದ ೮ ದಿನಗಳ ಹಿಂದೆ ಮನೆಯಲ್ಲಿಯೇ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ರಂಜಿತ್ನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಆದರೆ ಯಾವುದೇ ಚೇತರಿಕೆ ಕಾಣದ ಹಿನ್ನೆಲೆ ಕಳೆದ ೪ ದಿನಗಳ ಹಿಂದೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ಅಲ್ಲಿಯೂ ಸಹ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ರಂಜಿತ್ ಪತ್ನಿಯನ್ನು ಅಗಲಿದ್ದು, ಅಂತ್ಯಕ್ರಿಯೆ ಮಾದಾಪುರದಲ್ಲಿ ನೆರವೇರಿತು.