ಗೋಣಿಕೊಪ್ಪಲು, ನ. ೯ : ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯ ಕೈಕೇರಿ ಬಳಿಯ ಭಗವತಿ ದೇವಾಲಯದ ತಿರುವಿನಲ್ಲಿ ಆಟೋರಿಕ್ಷಾ ಹಾಗೂ ಆಲ್ಟೊ ಕಾರುವಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಆಟೋ ಚಾಲನೆ ಮಾಡುತ್ತಿದ್ದ ಕೈಕೇರಿ ಗ್ರಾಮದ ನಿವಾಸಿ ಶಿವಣ್ಣನಾಯಕ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೈಕೇರಿ ಭಗವತಿ ದೇವಾಲಯದ ತಿರುವಿನಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ಆಟೋರಿಕ್ಷಾ ಗೋಣಿಕೊಪ್ಪ ಕಡೆಗೆ ತೆರಳುತ್ತಿದ್ದ ವೇಳೆ ಗೋಣಿಕೊಪ್ಪ ಕಡೆಯಿಂದ ವೀರಾಜಪೇಟೆ ಕಡೆಗೆ ವೇಗವಾಗಿ ತೆರಳುತ್ತಿದ್ದ ಆಲ್ಟೊ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಪಡಿಸಿದೆ. ಇದರಿಂದ ಆಟೋರಿಕ್ಷಾವು ಮಗುಚಿಕೊಂಡಿದ್ದು ಚಾಲಕನಿಗೆ ಗಂಭೀರ ಗಾಯವಾಗಿದೆ. ಮಧ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರು ಕೂಡಲೇ ಸ್ಥಳಕ್ಕೆ ತೆರಳಿ ಕಾರನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಗೋಣಿಕೊಪ್ಪ ಪೊಲೀಸರು ತೆರಳಿ ಆಲ್ಟೊ ಕಾರಿನ ಚಾಲಕ ಕಳತ್ಮಾಡು ಗ್ರಾಮದ ಸತೀಶ್ ಎಂಬವರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವೀರಾಜಪೇಟೆ, ಗೋಣಿಕೊಪ್ಪ ರಸ್ತೆಯು ಅಗಲೀಕರಣಗೊಂಡಿದ್ದು ಉತ್ತಮ ರಸ್ತೆ ಆಗಿರುವುದರಿಂದ ವಾಹನಗಳು ವೇಗವಾಗಿ ಚಲಿಸುತ್ತಿವೆ. ಇತ್ತೀಚೆಗೆ ಈ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಪೊಲೀಸ್ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಹಲವು ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಚಾಲಕರು ಗಮನ ಹರಿಸದಿರುವುದು ವಿಪರ್ಯಾಸ. - ಹೆಚ್.ಕೆ. ಜಗದೀಶ್