ಮಡಿಕೇರಿ, ನ. ೮: ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಇತ್ತೀಚೆಗೆ ಧ್ವಜ ಹಿಡಿದು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಚ್ಯುತಿ ತರಲಾಗಿದೆ ಎಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಉಳ್ಳಿಯಡ ಎಂ. ಪೂವಯ್ಯ ಅವರು, ಇತ್ತೀಚಿನ ದಿನಗಳಲ್ಲಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಧಾರ್ಮಿಕ ಆಚರಣೆಗೆ ವಿರುದ್ಧವಾದ ಚಟುವಟಿಕೆಗಳು ನಡೆಯುತ್ತಿದೆ ಎಂದು ಆರೋಪಿಸಿದರು.

ಬೆಳಗಾವಿ ಭಾಗದ ಕೆಲವು ಸಾಧು ಸಂತರು ತಲಕಾವೇರಿಯ ಪವಿತ್ರ ಕುಂಡಿಕೆ ಸಮೀಪ ಗುಂಪುಗೂಡಿ ಕನ್ನಡ ರಾಜ್ಯೋತ್ಸವ ಆಚರಿಸುವ ನೆಪದಲ್ಲಿ ಪುಣ್ಯಕ್ಷೇತ್ರದ ಪಾವಿತ್ರö್ಯತೆಗೆ ಧಕ್ಕೆ ತಂದಿರುವುದು ಖಂಡನೀಯ. ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಕಾವೇರಿ ಕ್ಷೇತ್ರದಲ್ಲಿ ಈ ರೀತಿಯ ಅಚಾತುರ್ಯ ಇಲ್ಲಿಯವರೆಗೆ ನಡೆದಿರುವ ಉದಾಹರಣೆಗಳೇ ಇಲ್ಲ. ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ, ಸಾರ್ವಜನಿಕ ಸಭೆ, ವಿಚಾರಗೋಷ್ಠಿ, ಕವಿಗೋಷ್ಠಿಯಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ಸ್ಥಳೀಯರ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಎಂದು ಪೂವಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ತಲಕಾವೇರಿ ಕ್ಷೇತ್ರವನ್ನು ಯಾರೂ ದುರ್ಬಳಕೆ ಮಾಡಬಾರದು, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸಬೇಕು. ದೇವಾಲಯದ ತಕ್ಕಮುಖ್ಯಸ್ಥರೇ ರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭ ಹಾಜರಿದ್ದರು. ಇದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ತಕ್ಕಮುಖ್ಯಸ್ಥರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ವೇದಿಕೆಯ ಮುಖ್ಯ ಸಂಚಾಲಕ ಕೊಕ್ಕಲೆರ ಎ. ಕಾರ್ಯಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳಲ್ಲಿ ಸ್ಥಳೀಯ ಕಟ್ಟುಪಾಡುಗಳಿಗೆ ವಿರುದ್ಧವಾಗಿ ನಿಯಮ ಮೀರಿ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ವರ್ತಿಸುತ್ತಿರುವುದು ಖಂಡನೀಯ ಎಂದರು. ಭಾಗಮಂಡಲ, ತಲಕಾವೇರಿ ಕ್ಷೇತ್ರಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡದೆ ಇರುವುದರಿಂದ ಹಲವು ಸಮಸ್ಯೆ ಎದುರಾಗಿದೆ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡು ನೂತನ ವ್ಯವಸ್ಥಾಪನಾ ಸಮಿತಿ ರಚಿಸಿ ಖಾಯಂ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸದಸ್ಯ ಮಣವಟ್ಟಿರ ಪಾಪು ಚೆಂಗಪ್ಪ ಉಪಸ್ಥಿತರಿದ್ದರು.