ಸಿದ್ದಾಪುರ, ನ. ೯: ಆಸರೆ ಇಲ್ಲದೆ ಬದುಕಿದ ಜೀವಕ್ಕೆ ಆಸರೆಯಾದ ಸಾಕು ಪ್ರಾಣಿಗಳು. ಸಮಗ್ರ ಪಶು ಸಂಗೋಪನೆಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿರುವ ಮಹಿಳೆ ಎಲ್ಲರಿಗೂ ಮಾದರಿಯಾಗಿದ್ದಾರೆ.

ನೆಲ್ಯಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿ ನಿವಾಸಿ ಲೀಲಮ್ಮ ಕಳೆದ ೨೦ ವರ್ಷಗಳಿಂದ ತನ್ನ ಮನೆಯಲ್ಲಿ ಹಸು, ಮೇಕೆ, ಕೋಳಿಗಳನ್ನು ಸಾಕಿ, ಆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

೨೫ ಸೆಂಟ್ ಜಾಗದಲ್ಲಿ ಹೈನುಗಾರಿಕೆ: ಎಂ.ಜಿ. ಕಾಲೋನಿಯಲ್ಲಿ ಸಣ್ಣ ಮನೆಯಲ್ಲಿ ವಾಸವಿರುವ ಇವರು, ೨೫ ಸೆಂಟ್ ಜಾಗದಲ್ಲಿ ಹಸುಗಳು, ಮೇಕೆ ಹಾಗೂ ಕೋಳಿಗಳನ್ನು ಸಾಕುತ್ತಿದ್ದಾರೆ. ಪತಿಯನ್ನು ಕಳೆದುಕೊಂಡ ಇವರು ಬದುಕಿನ ನಿರ್ವಹಣೆಗಾಗಿ ಆರಂಭಿಸಿದ ಹೈನುಗಾರಿಕೆ ಇದೀಗ ಕೈ ಹಿಡಿದಿದೆ. ಪ್ರಾರಂಭದಲ್ಲಿ ೨ ಹಸುವನ್ನು ಸಾಕಿದ ಇವರು ನಂತರ ಏಳು ಹಸುಗಳನ್ನು ಹೊಂದಿದರು. ಪ್ರಸ್ತುತ ಗಬ್ಬದ ಎರಡು ಹಸು ಹಾಗೂ ಒಂದು ಕರುವನ್ನು ಹೊಂದಿದ್ದಾರೆ. ಇವರು ಪ್ರತಿದಿನ ೧೫-೩೦ ಲೀಟರ್ ಹಸುವಿನ ಹಾಲನ್ನು ಪಡೆದು, ಪ್ರತೀ ಲೀಟರ್‌ಗೆ ರೂ. ೪೦ ರಂತೆ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಅಕ್ಕಪಕ್ಕದ ಮನೆಯವರು ಈಕೆಯ ಗ್ರಾಹಕರಾಗಿರುವುದರಿಂದ ಹಾಲನ್ನು ಸುಲಭವಾಗಿ ತಲುಪಿಸಲು ಸಾಧ್ಯವಾಗಿದೆ.ಇದರೊಂದಿಗೆ ವರ್ಷಕ್ಕೆ ಮೂರು ಲೋಡು ಸಗಣಿ ಗೊಬ್ಬರ ದೊರಕುತ್ತಿದ್ದು, ಒಂದು ಲೋಡಿಗೆ ರೂ. ೧೦ ಸಾವಿರದಂತೆ ಮಾರಾಟ ಮಾಡಿ ಯಶಸ್ಸು ಕಾಣುತ್ತಿದ್ದಾರೆ.

ಅಲ್ಲದೆ ಇವರ ಬಳಿ ಜಮುನಾ ಪ್ಯಾರಿ ಹಾಗೂ ಮಲಬಾರಿ ತಳಿಯ ಮೇಕೆಗಳಿದ್ದು ಎರಡು ಮೇಕೆಗಳಿಂದ ಶುರುವಾದ ಸಾಕಾಣಿಕೆಯು ಈಗ ೧೩ ಮೇಕೆಗಳನ್ನು ಹೊಂದಿದ್ದಾರೆ. ಮೇಕೆಗಳಿಂದ ವಾರ್ಷಿಕವಾಗಿ ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ.

ಮೊಟ್ಟೆ ಮಾರಿ ಸಾಲದಿಂದ ವಿಮುಕ್ತಿ!: ಹಸು ಹಾಗೂ ಕುರಿ ಸಾಕಾಣಿಕೆಯಲ್ಲಿ ತೊಡಗಿದ ಲೀಲಮ್ಮ ಕುಕ್ಕುಟೋದ್ಯಮದಲ್ಲೂ ಸೈ ಎನಿಸಿಕೊಂಡಿದ್ದಾರೆ. ದೇಶೀ ತಳಿ ಎಂದೇ ಖ್ಯಾತಿಯ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ನಾಟಿ ಕೋಳಿಗಳನ್ನು ಸಾಕುತ್ತಿದ್ದು, ೭೦ಕ್ಕೂ ಅಧಿಕ ಸಂಖ್ಯೆಯಲ್ಲಿ ಹೆಂಟೆ ಕೋಳಿಗಳಿದ್ದು ಪ್ರತಿನಿತ್ಯ ೨೦ ರಿಂದ ೩೦ ಮೊಟ್ಟೆಗಳು ದೊರಕುತ್ತಿವೆ. ಅಲ್ಲದೆ ಹುಂಜ ಕೋಳಿ ಸೇರಿದಂತೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ನಾಟಿ ಕೋಳಿ ಮೊಟ್ಟೆಗೆ ಬಾರೀ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯರು ಈಕೆಯ ಮನೆಗೆ ಆಗಮಿಸಿ ಮೊಟ್ಟೆಗಳನ್ನು ಖರೀದಿಸುತ್ತಾರೆ.

ಒಂದು ನಾಟಿ ಕೋಳಿ ಮೊಟ್ಟೆಗೆ ರೂ. ೧೨ ನಿಗದಿಪಡಿಸಲಾಗಿದ್ದು, ಮೊಟ್ಟೆಗೆ ಬಾರೀ ಬೇಡಿಕೆ ಇದೆ. ಇವರು ನಾಟಿಕೋಳಿಗಳನ್ನು ಖರೀದಿಸದೇ ಮನೆಯಲ್ಲಿ ಲಭ್ಯವಿರುವ ಕೋಳಿ ಮೊಟ್ಟೆಗಳಿಂದಲೇ ಮರಿ ಮಾಡುವ ಮೂಲಕ ಕೋಳಿಗಳನ್ನು ಸಾಕುತ್ತಿದ್ದಾರೆ. ದೇವಸ್ಥಾನಕ್ಕೆ ಕೋಳಿಗಳನ್ನು ಹರಕೆ ಹೊತ್ತುಕೊಂಡವರು, ನಾಟಿ ಕೋಳಿ ಖರೀದಿಸಲು ದಿನ ನಿತ್ಯ ಇವರನ್ನು ಹುಡುಕಿ ಬರುತ್ತಾರೆ. ಅಲ್ಲದೆ ಕಳೆದ ಒಂದು ವರ್ಷಗಳಲ್ಲಿ ಕೋಳಿ ಮೊಟ್ಟೆ ಮಾರಿ ಬಂದ ಹಣದಲ್ಲಿ ಅಡವಿಟ್ಟಿದ್ದ ಚಿನ್ನವನ್ನು ರೂ. ೨೫ ಸಾವಿರ ಪಾವತಿಸಿ ಬ್ಯಾಂಕಿನಿAದ ಬಿಡಿಸಿಕೊಂಡಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ ಲೀಲಮ್ಮ.

ಹೈನುಗಾರಿಕೆಗೆ ಪ್ರೋತ್ಸಾಹ ನೀಡದ ಗ್ರಾ.ಪಂ.: ಯಾರ ಆಸರೆ ಇಲ್ಲದೆ ತನ್ನ ದುಡಿಮೆಯಿಂದಲೇ ಬದುಕುತ್ತಿರುವ ಲೀಲಮ್ಮ ಕಳೆದ ಹಲವಾರು ವರ್ಷಗಳಿಂದ ಕೊಟ್ಟಿಗೆಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯ ಕದ ತಟ್ಟಿ ಮನವಿ ಪತ್ರ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಗ್ರಾ.ಪಂ. ವತಿಯಿಂದ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ,ವಿವಿಧ ಯೋಜನೆ ಮೂಲಕ ಸಹಾಯ ಧನ ನೀಡಬೇಕಾದ ಸ್ಥಳೀಯ ಪಂಚಾಯತಿ ಈಕೆಯ ಮನವಿಯನ್ನು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಇಂದಿಗೂ ಲೀಲಮ್ಮ ಕುಸಿಯುವ ಹಂತಕ್ಕೆ ತಲುಪಿರುವ ಕೊಟ್ಟಿಗೆ ಹಾಗೂ ಸಣ್ಣದಾದ ಮೇಕೆ ಗೂಡುಗಳಲ್ಲೇ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಕೋಳಿ ಗೂಡು ಕೂಡ ಸಣ್ಣದಾಗಿರುವ ಹಿನ್ನೆಲೆಯಲ್ಲಿ ಕೋಳಿಗಳು ಕಾಫಿ ಗಿಡ ಹಾಗೂ ಮನೆಯ ಜಗಲಿಯಲ್ಲಿ ಆಶ್ರಯ ಪಡೆದುಕೊಳ್ಳುತ್ತಿದೆ. ಎಲ್ಲರಿಗೂ ಮಾದರಿಯಾಗಿರುವ ಈಕೆಗೆ ಆಡಳಿತ ನೆರವು ದೊರೆತರೆ ಮತ್ತಷ್ಟು ಸಾಧನೆ ಸಾಧ್ಯವಾಗುತ್ತದೆ. - ಎ.ಎನ್. ವಾಸು, ಸಿದ್ದಾಪುರ