ಮಡಿಕೇರಿ, ನ. ೯: ಕ್ರೀಡೆಗೆ ಹೆಸರಾದ ಕೊಡಗಿನಲ್ಲಿ ಹತ್ತು ಹಲವಾರು ಕ್ರೀಡಾಸ್ಪರ್ಧೆಗಳು ವರ್ಷಂಪ್ರತಿ ಜರುಗುತ್ತವೆ. ಹಾಕಿ ಪಂದ್ಯಾವಳಿ, ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ವಿವಿಧ ಗ್ರಾಮೀಣ ಕ್ರೀಡೆಗಳು, ಇವುಗಳೊಂದಿಗೆ ರಸದೌತಣ ನೀಡುವ ಕೆಸರು ಗದ್ದೆ ಕ್ರೀಡಾಕೂಟಗಳು, ವಾಹನ ರ್ಯಾಲಿಗಳು, ರಸ್ತೆ ಓಟ ಇತ್ಯಾದಿ ಕ್ರೀಡೆಗಳು ಸಾಮಾನ್ಯವಾಗಿವೆ. ಇವುಗಳೊಂದಿಗೆ ಇತ್ತೀಚಿನ ಕೆಲ ವರ್ಷದಿಂದ ಪ್ರಾರಂಭಗೊAಡಿರುವ ರಿವರ್ ಸ್ವಿಮ್ಮಿಂಗ್, ಮಹಿಳಾ ಕ್ರಿಕೆಟ್, ಕ್ಯಾಟಫಲ್ಟ್ (ರಬ್ಬರ್ ಬಿಲ್ ಸ್ಪರ್ಧೆ)ಗಳೂ ಗಮನ ಸೆಳೆಯುತ್ತಿವೆ.
ಮೈದಾನಗಳಲ್ಲಿನ ಸ್ಪರ್ಧೆಗಳು, ಕೆಸರು ಗದ್ದೆಗಳಲ್ಲಿನ ರೋಚಕ ಆಟಗಳು ಒಂದೆಡೆಯಾದರೆ ಇದೀಗ ಇವೆಲ್ಲದರ ಸಾಲಿಗೆ ಹೊಸತೊಂದು ಕ್ರೀಡೆಯನ್ನು ಪ್ರಾರಂಭಿಸಲಾಗಿದೆ. ಅದು ಹರಿಯುವ ನದಿಯಲ್ಲಿ ಮೈನವಿರೇಳಿಸುವ ಸಾಹಸಮಯ ಜಲಕ್ರೀಡೆಯೊಂದು ಸೇರ್ಪಡೆಗೊಂಡಿದೆ.
ದುಬಾರೆಯ ಕಾವೇರಿ ನದಿಯಲ್ಲಿ ಈ ಜಲಕ್ರೀಡೆಯ ಸಾಹಸ ನಡೆಯಿತು. ಪ್ರವಾಸಿ ಜಿಲ್ಲೆಯಾಗಿ ಗುರುತಿಸಲ್ಪಟ್ಟಿರುವ ಜಿಲ್ಲೆಯ ಪ್ರವಾಸಿ ತಾಣಗಳ ಪೈಕಿ ದುಬಾರೆಯೂ ಪ್ರಮುಖವಾದದ್ದು. ಇಲ್ಲಿ ರ್ಯಾಫ್ಟಿಂಗ್ಗಾಗಿ ಜನರು ಮುಗಿ ಬೀಳುತ್ತಾರೆ. ಸಾಕಷ್ಟು ರ್ಯಾಫ್ಟ್ಗಳೂ ಇಲ್ಲಿವೆ. ಇದೀಗ ಇದೇ ಪ್ರಥಮ ಬಾರಿಗೆ ರ್ಯಾಫ್ಟಿಂಗ್ ನಡೆಸುತ್ತಿರುವವರು ಸೇರಿ ಈ ಕ್ರೀಡೆಯನ್ನು ನಡೆಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಲಕ್ರೀಡೆ ಸಾಹಸ ನಡೆಯಿತು. ದುಬಾರೆ, ನಂಜರಾಯಪಟ್ಟಣದ ಕಾವೇರಿ ರಿವರ್ ರ್ಯಾಫ್ಟಿಂಟ್ ನೌಕರರ ಸಂಘದವರು ಈ ಕ್ರೀಡೆಯನ್ನು ಆಯೋಜಿಸಿದ್ದರು.
ರೋಚಕ ಸ್ಪರ್ಧೆಗಳು
ಹರಿಯುವ ನದಿಯಲ್ಲಿ ಈಜು ಸ್ಪರ್ಧೆ, ಹಗ್ಗಜಗ್ಗಾಟ, ಬೋಟ್ ರೈಸಿಂಗ್, ಬೋಟ್ ಫ್ಲಿಪ್ಪಿಂಗ್ (ಉಲ್ಟಾ ಮಾಡುವುದು) ರ್ಯಾಫ್ಟ್ ಚೇಸಿಂಗ್ ನಂತಹ ಸ್ಪರ್ಧೆಗಳು ರೋಮಾಂಚನ ಮೂಡಿಸಿದವು. ಈಜು ಸ್ಪರ್ಧೆಯಲ್ಲಿ ಸುಮಾರು ೪೦ ಜನ ಪಾಲ್ಗೊಂಡಿದ್ದರು. ೩ ರಿಂದ ೪ ಅಡಿ ಆಳದ ನೀರಿನಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಇದರಲ್ಲಿ ೧೨ ತಂಡಗಳು ಪಾಲ್ಗೊಂಡಿದ್ದವು. ಒಂದು ರ್ಯಾಫ್ಟ್ನಲ್ಲಿ ೮ ಮಂದಿಯನ್ನು ಒಳಗೊಂಡAತೆ ಬೋಟ್ ಫ್ಲಿಪ್ಲಿಂಗ್ ರ್ಯಾಫ್ಟನ್ನು ಉಲ್ಟಾ ಮಾಡುವ) ಸಾಹಸದ ಕ್ರೀಡೆಯಲ್ಲಿ ೧೦ ತಂಡಗಳು ಭಾಗಿಯಾಗಿದ್ದವು.
ತಲಾ ೮ ಜನರನ್ನು ಒಳಗೊಂಡAತೆ ರ್ಯಾಫ್ಟ್ ಚೇಸಿಂಗ್ ಸ್ಪರ್ಧೆಯಲ್ಲಿಯೂ ೧೦ ತಂಡಗಳು ಭಾಗವಹಿಸಿದ್ದವು. ಸುಮಾರು ಒಂದೂವರೆ ಕಿ.ಮೀ. ಅಂತರದ ರ್ಯಾಫ್ಟ್ ಚೇಸಿಂಗ್ ಸ್ಪರ್ಧೆ ಮೈನವಿರೇಳಿಸುವಂತೆ ಮಾಡಿತ್ತು. ರ್ಯಾಫ್ಟ್ ನಡೆಸುವ ಮಾಲೀಕರು- ಸಿಬ್ಬಂದಿಗಳು ಈ ಸ್ಪರ್ಧೆಯಲ್ಲಿ ಭಾಗಿಗಳಾಗಿದ್ದರು. ದುಬಾರೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರಿಗೂ ಅಪರೂಪದ ಈ ಸ್ಪರ್ಧೆ ಮುದ ನೀಡಿತು.
ಈಜು ಸ್ಪರ್ಧೆಯಲ್ಲಿ ರೋಷನ್, ಪ್ರತಾಪ್, ಪುನೀತ್ ಪ್ರಥಮ ಮೂರು ಸ್ಥಾನ ಗಳಿಸಿದರು. ಇತರ ಸ್ಪರ್ಧೆಗಳಲ್ಲಿ ಮನೇಶ್ ತಂಡ, ಉಮೇಶ್ ತಂಡ, ಯೋಗೇಶ್ ತಂಡ, ಪ್ರತಾಪ್ ತಂಡ, ಲಿಖಿತ್ ತಂಡ, ನಿತಿನ್ ತಂಡ, ಚಿಂತು ತಂಡ, ಕುಟ್ಟ ತಂಡದವರು ಬಹುಮಾನ ಗಳಿಸಿದರು.
ಪ್ರಥಮ ವರ್ಷದ ಪ್ರಯತ್ನವಾಗಿದ್ದರಿಂದ ಈ ಜಲಕ್ರೀಡೆಯಲ್ಲಿ ಹೆಚ್ಚಿನ ಪ್ರಚಾರ ಇಲ್ಲದೆ ನಡೆಸಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ರ್ಯಾಫ್ಟ್ ಮಾಲೀಕರು, ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ , ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುರಳಿ ಮಾದಯ್ಯ, ದುಬಾರೆ ಇನ್ ಸಂಸ್ಥೆಯ ರತೀಶ್, ಅರಣ್ಯಾಧಿಕಾರಿ ರಂಜನ್ ನವೀನ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಮೋಹನ್ ರಾಜ್, ರ್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿಜು ಚೆಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.
-ಶಶಿ ಸೋಮಯ್ಯ