*ಸಿದ್ದಾಪುರ, ನ. ೮: ಕೊಡಗು ಜಿಲ್ಲೆಯ ಕೆಲವು ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಅಭಿಯಾನಕ್ಕೆ ಹಿನ್ನಡೆಯಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಪಂಚಾಯ್ತಿ ಸೂಕ್ತ ಜಾಗವನ್ನು ಗುರುತಿಸಿ ಕ್ರಮಕೈಗೊಳ್ಳದೆ ಇರುವುದೇ ಈ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ.
ನಿತ್ಯ ಕಸದ ಸಮಸ್ಯೆಯನ್ನು ಎದುರಿಸುತ್ತಿರುವ ಗ್ರಾ.ಪಂ.ಗಳಲ್ಲಿ ನೆಲ್ಲಿಹುದಿಕೇರಿ ಕೂಡ ಒಂದಾಗಿದೆ. ದಿನದಿಂದ ದಿನಕ್ಕೆ ಗ್ರಾಮಗಳು ಬೆಳೆಯುತ್ತಿವೆ, ಕಟ್ಟಡಗಳು ಮತ್ತು ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಪೂರಕವಾಗಿ ತ್ಯಾಜ್ಯ ವಿಲೇವಾರಿಯ ವ್ಯವಸ್ಥೆ ಇನ್ನೂ ಕೂಡ ಮೇಲ್ದರ್ಜೆಗೆ ಏರಿಲ್ಲ. ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸದೆ ಇರುವುದರಿಂದ ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಹಳೇ ಸೇತುವೆ ಪಕ್ಕದ ಹೊಳೆಕರೆ ಪೈಸಾರಿ ರಸ್ತೆ ತ್ಯಾಜ್ಯಮಯವಾಗಿ ಮಾರ್ಪಟ್ಟಿದೆ. ಮರದ ಬುಡ ಸೇರಿದಂತೆ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದ್ದು, ಅಶುಚಿತ್ವದ ವಾತಾವರಣ ಸೃಷ್ಟಿಯಾಗಿದೆ. ಜೋರಾಗಿ ಗಾಳಿ ಬಂದಾಗ ಕಸ ಹೊಳೆಯನ್ನು ಸೇರುತ್ತಿದೆ. ಪಕ್ಕದಲ್ಲೇ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ನೀರು ಕಲುಷಿತವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅನೇಕ ಸಮಸ್ಯೆಗಳು
ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅನೇಕ ಮೂಲಭೂತ ಸಮಸ್ಯೆಗಳಿವೆ. ಆಡಳಿತ ನಡೆಸುವವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತ್ಯಾಜ್ಯಗಳ ವಿಲೇವಾರಿಗೆ ಇನ್ನೂ ಕೂಡ ಜಾಗ ಗುರುತಿಸಿಲ್ಲ, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ರೋಗ ಭೀತಿ ಎದುರಾಗಿದೆ. ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಕಾಡುತಿದ್ದು, ಪಂಚಾಯ್ತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶೀಘ್ರ ಯೋಜನೆಯೊಂದನ್ನು ರೂಪಿಸಿ ಪರಿಹಾರ ಸೂಚಿಸಬೇಕು ಎಂದು ಸ್ಥಳೀಯ ನಿವಾಸಿ ಪಿ.ಆರ್. ಭರತ್ ಒತ್ತಾಯಿಸಿದ್ದಾರೆ.