ವೀರಾಜಪೇಟೆ, ನ. ೮: ಓದುವ ಹವ್ಯಾಸವು ಬದುಕನ್ನು ಸುಂದರ ಗೊಳಿಸುತ್ತದೆ ಎಂದು ಮಡಿಕೇರಿಯ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ಅಭಿಪ್ರಾಯಪಟ್ಟರು. ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಿರಂತರವಾಗಿ ಕಠಿಣ ಪರಿಶ್ರಮದಿಂದ ಅಭ್ಯಸಿಸಬೇಕು. ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವುದರ ಜೊತೆಗೆ ನೆಲ, ಜಲ, ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷ ಪ್ರತೀಕ್ ಪೊನ್ನಣ್ಣ ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ಅಗತ್ಯ ಯುವಕರು ರಾಷ್ಟçದ ಏಳಿಗೆಗಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ವಿದ್ಯಾರ್ಥಿಗಳು ಶಿಸ್ತು ನಿಯಮ ಗಳನ್ನು ರೂಪಿಸಿಕೊಂಡು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸ ಬೇಕೆಂದರು. ವೇದಿಕೆಯಲ್ಲಿ ಕ್ರೀಡಾ ಸಂಚಾಲಕಿ ರಾಖಿ ಪೂವಣ್ಣ, ಸಾಂಸ್ಕೃತಿಕ ಸಂಚಾಲಕ ಡಾ. ಬಸವರಾಜು. ಕೆ., ಐಕ್ಯೂಎಸಿ ಸಂಚಾಲಕ ನಾಗರಾಜ ಮೂರ್ತಿ ಉಪಸ್ಥಿತರಿದ್ದರು. ಡಾ. ಬಸವ ರಾಜು ಸ್ವಾಗತಿಸಿ, ವಿದ್ಯಾರ್ಥಿನಿ ಧನ್ಯ ನಿರೂಪಿಸಿದರು. ವೇಣು ಗೋಪಾಲ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.