*ಗೋಣಿಕೊಪ್ಪಲು, ನ. ೮: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮಡಿಕೇರಿ, ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದ ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಸಾದ್ ಕೆ.ಬಿ. ಸೈಬರ್ ಕಳ್ಳರು ದಿನಕ್ಕೊಂದು ವಂಚನೆಯ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ಅವರ ಮಾತಿಗೆ ಮರುಳಾಗಿ ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿAಗ್, ಆನ್ಲೈನ್ ವಂಚನೆ, ಸರ್ಕಾರಿ ವೆಬ್ಸೈಟ್ಗಳ ಹ್ಯಾಕ್, ಮೊಬೈಲ್ ಫೋನ್ ಹಾಗೂ ಇ-ಮೇಲ್ಗಳ ಮೂಲಕ ಜನರಿಗೆ ವಂಚನೆ ಆಗುತ್ತಿದೆ. ಅನುಮತಿ ಇಲ್ಲದೆ ಒಬ್ಬರ ಫೋಟೋಗಳನ್ನು ಹಾಕುವುದು, ಬ್ಯಾಂಕಿAಗ್ ಹಾಗೂ ಎಸ್.ಎಂ.ಎಸ್. ಮೂಲಕ ನಡೆಸುವ ವಂಚನೆಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲೆ ಬರುತ್ತವೆೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪೊಲೀಸರು ಕ್ಲಿಷ್ಟಕರವಾದ ಎಷ್ಟೋ ಪ್ರಕರಣಗಳನ್ನು ಭೇದಿಸಿರುವ ಉದಾಹರಣೆಗಳಿವೆ. ಅಂತರ್ಜಾಲದ ಬಳಕೆದಾರರು ಸೈಬರ್ ಅಪರಾಧಗಳ ಕುರಿತು ಎಚ್ಚರದಿಂದಿರಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಅಪರಾಧ ಪೊಲೀಸ್ ಠಾಣೆಯ ದೀಪಕ್ ಬಿ.ಕೆ. ನಿಮ್ಮ ಮೊಬೈಲ್ ನಂಬರ್ಗೆ ಅಪರಿಚಿತ ವ್ಯಕ್ತಿಗಳು ಕರೆಮಾಡಿ ನಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿ ನಿಮ್ಮ ಎ.ಟಿ.ಎಂ. ನ ಕ್ರೆಡಿಟ್, ಡೆಬಿಟ್ಕಾರ್ಡ್ ಮುಕ್ತಾಯಗೊಂಡಿದೆ. ಅದನ್ನು ರಿನಿವಲ್ ಮಾಡಲು ನಿಮ್ಮ ಮೊಬೈಲ್ಗೆ ಬಂದಿರುವ ಒ.ಟಿ.ಪಿ. ಮೆಸೇಜ್ ತಿಳಿಸಿ ಎಂದು ಹೇಳಿ ನಿಮ್ಮ ಖಾತೆಯಿಂದ ಹಣವನ್ನು ಲಪಟಾಯಿಸುತ್ತಾರೆ. ಇಂತಹ ಕರೆಗಳ ಬಗ್ಗೆ ಎಚ್ಚರವಹಿಸಿ. ಯಾರು ಕೂಡ ಅಪರಿಚಿತ ಫೋನ್ ಕರೆಗಳಿಗೆ ಸ್ಪಂದಿಸಿ ಮೋಸ ಹೋಗಬೇಡಿ. ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪ್ರಾಂಶುಪಾಲರಾದ ಡಾ. ಎಂ.ಬಿ. ಕಾವೇರಪ್ಪ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಎಂ.ಕೆ. ಪದ್ಮಾ, ಡಾ. ನಯನಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಚಾಲಕ ಜೋಯಪ್ಪ, ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಲೇಪಾಕ್ಷಿ ಐ.ಡಿ. ಇದ್ದರು.