ಮಡಿಕೇರಿ, ನ. ೯: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳನ್ನು ಜೇಷ್ಠತೆ ಪಟ್ಟಿಗೆ ಸೇರಿಸುವದು, ಗ್ರೇಡ್ ಬಿ ವೃಂದಕ್ಕೆ ಸೇರಿಸು ವದು ಹಾಗೂ ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದಾದ್ಯಂತ ಅಭಿವೃದ್ಧಿ ಅಧಿಕಾರಿಗಳು ಅಸಹಕಾರ ಚಳವಳಿಯೊಂದಿಗೆ ಮುಷ್ಕರದಲ್ಲಿ ತೊಡಗಿರುವದರಿಂದ ಆನ್‌ಲೈನ್ ಸೇವೆ ಸೇರಿದಂತೆ ಕೆಲವೊಂದು ಸಾರ್ವಜನಿಕ ಕೆಲಸ ಕಾರ್ಯಗಳೂ ಸ್ಥಗಿತಗೊಂಡಿವೆ. ಕೊಡಗು ಜಿಲ್ಲೆಯಲ್ಲಿಯೂ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಓಗಳು ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಿನ್ನೆಯಿಂದ ಅಸಹಕಾರ ಚಳವಳಿ ಆರಂಭಿಸಲಾಗಿದ್ದು, ಮುಂದುವರಿದಿದೆ. ಈಗಾಗಲೇ ಪಂಚಾಯತ್‌ರಾಜ್ ಇಲಾಖೆಯ ಅಧಿಕೃತ ವ್ಯಾಟ್ಸ್ ಆ್ಯಪ್‌ನಿಂದ ಹೊರಬಂದಿರುವ ಅಧಿಕಾರಿಗಳು ಪಂಚಾಯಿತಿಗಳಿಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರಾದರೂ ಯಾವದೇ ಕೆಲಸಗಳನ್ನು ಮಾಡುತ್ತಿಲ್ಲ. ಪ್ರಮುಖವಾಗಿ ಆನ್‌ಲೈನ್ ಮುಖಾಂತರ ಆಗಬೇಕಾಗಿರುವ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ಕುಡಿಯುವ ನೀರು ಸೇರಿದಂತೆ ಇತರ ತುರ್ತು ಕೆಲಸ ಕಾರ್ಯಗಳಿಗೆ ಜನರಿಗೆ ಅನಾನುಕೂಲವಾಗದಂತೆ ಸ್ಪಂದಿಸುತ್ತಿದ್ದಾರೆ.
ಸರಕಾರ ರಾಜ್ಯಾದ್ಯಂತ ಕೇವಲ ೧೫೦೦ ಮಂದಿಯನ್ನು ಮಾತ್ರ ಗ್ರೇಡ್ ಬಿ ವೃಂದಕ್ಕೆ ಸೇರ್ಪಡೆ ಮಾಡಿದ್ದು, ಇದಕ್ಕೆ ಅನುಸರಿಸಲಾಗಿರುವ ಮಾನದಂಡಗಳ ಬಗ್ಗೆ ಪ್ರಶ್ನಿಸಿರುವ ಪಿಡಿಓಗಳು ಎಲ್ಲರನ್ನು ಬಿ ವೃಂದಕ್ಕೆ ಸೇರ್ಪಡೆಗೊಳಿಸು ವಂತೆ ಪಟ್ಟುಹಿಡಿದಿದ್ದಾರೆ. ಅಸಹಕಾರ ಚಳವಳಿಗೆ ಸರಕಾರದಿಂದ ಸ್ಪಂದನ ಸಿಗದೇ ಹೋದಲ್ಲಿ ಕಚೇರಿ ಬಹಿಷ್ಕರಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವದಲ್ಲದೆ, ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿರುವ ಬಗ್ಗೆ ತಿಳಿದು ಬಂದಿದೆ.