ಕಣಿವೆ, ನ. ೮: ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಹಪ್ರಾಧ್ಯಾಪಕ ಡಾ. ಎಸ್. ಸುನಿಲ್ ಕುಮಾರ್, ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚುತ್ತದೆ. ಮಕ್ಕಳಲ್ಲಿ ಅಡಗಿರುವ ಜ್ಞಾನ ಭಂಡಾರವನ್ನು ಹೊರಹಾಕಲು ಇದೊಂದು ಅತ್ಯದ್ಭುತ ವೇದಿಕೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಎಂ. ಪ್ರವೀಣ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕರಾದ ಡಾ. ಹರ್ಷ, ಸುಧಾಕರ್ ಶೆಟ್ಟಿ, ದೈಹಿಕ ನಿರ್ದೇಶಕಿ ಜಯಂತಿ ಹಾಗೂ ಇತರರು ಇದ್ದರು. ರಸಪ್ರಶ್ನೆ ಸ್ಪರ್ಧೆಗೆ ಸುಮಾರು ೬೦ ತಂಡಗಳು ಭಾಗವಹಿಸಿದ್ದರಿಂದ ಮೊದಲಿಗೆ ಪರೀಕ್ಷೆ ಮೂಲಕ ೪ ತಂಡಗಳನ್ನು ಆಯ್ಕೆ ಮಾಡಲಾಯಿತು.

ನಂತರ ನಡೆದ ೫ ಸುತ್ತಿನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿಗಳಾದ ಸುದೀಪ್ ಮತ್ತು ಪ್ರತಾಪ್ ಪ್ರಥಮ ಬಹುಮಾನ ಪಡೆದರೆ, ಅಂತಿಮ ಬಿಸಿಎ ಮಹಮ್ಮದ್ ನೌಶಾದ್ ರಫಿ ಮತ್ತು ಸೋನು ಜಗದೀಶ್ ಅವರು ದ್ವಿತೀಯ ಸ್ಥಾನ ಪಡೆದುಕೊಂಡರು. ಪ್ರಬಂಧ ಸ್ಪರ್ಧೆಯಲ್ಲಿ ೫೦ ಮಂದಿ ಭಾಗವಹಿಸಿದ್ದರು.