ಮಡಿಕೇರಿ, ನ. ೯: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶುಕ್ರವಾರದಂದು ವಾರದ ಸಂತೆ ನಡೆಯುತ್ತದೆ. ಮಾರುಕಟ್ಟೆ ಆವರಣದಲ್ಲಿ ಹಲವಷ್ಟು ಸಮಸ್ಯೆಗಳನ್ನು ಪ್ರತಿವಾರವೂ ಕಾಣಬಹುದಾಗಿದೆ. ಸಂತೆ ದಿನ ಮುಗಿದ ಬಳಿಕ ಶನಿವಾರದಂದು ನಗರಸಭೆಯಿಂದ ಆವರಣವನ್ನು ಶುಚಿಗೊಳಿಸಲಾಗುತ್ತದೆ. ಆದರೆ ಅದಾದ ಬಳಿಕ ಗುರುವಾರದ ತನಕ ಆ ಆವರಣ ಬೀಡಾಡಿ ದನಗಳಿಗೆ, ಬೀದಿ ನಾಯಿಗಳಿಗೆ ಆಶ್ರಯತಾಣವಾಗುತ್ತಿದೆ. ದನಗಳು ಹಾಕುವ ಸಗಣಿ ಇಲ್ಲೇ ಇರುತ್ತದೆ. ಬರುವ ಕೆಲವು ವ್ಯಾಪಾರಿಗಳೇ ಇದನ್ನು ಸ್ವಚ್ಛಗೊಳಿಸಿ ತಮ್ಮ ಮಳಿಗೆಗಳನ್ನು ಹಾಕಿಕೊಳ್ಳುತ್ತಾರೆ. ಇನ್ನು ಕೆಲವರು ಪ್ಲಾಸ್ಟಿಕ್ ಹಾಕಿ ಮುಚ್ಚಿ ಅದರ ಮೇಲೆಯೇ ವ್ಯಾಪಾರ ನಡೆಸುವ ಅನಿವಾರ್ಯತೆ ಇಲ್ಲಿ ಸಾಮಾನ್ಯ ಎಂದು ಹಲವಷ್ಟು ಗ್ರಾಹಕರು ಹೇಳುತ್ತಾರೆ. ಈ ಬಗ್ಗೆ ಕೆಲವು ವ್ಯಾಪಾರಿಗಳೂ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ನಗರಸಭೆ ಆಡಳಿತ ಇತ್ತ ಗಮನ ಹರಿಸುವುದು ಒಳಿತು ಎಂದು ನಾಗರಿಕರಾದ ಕೊಕ್ಕಲೆರ ಕಾರ್ಯಪ್ಪ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.