ಸೋಮವಾರಪೇಟೆ, ನ. ೮: ಇಲ್ಲಿನ ಪದವಿಪೂರ್ವ ಕಾಲೇಜಿನಲ್ಲಿ ಮತದಾರರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಬೆಳ್ಳಿಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿ, ೧೮ ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಚುನಾವಣೆಗಳಲ್ಲಿ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕಿ ಎಂ.ಬಿ. ತಿಲೋತ್ತಮೆ, ಚುನಾವಣಾ ಸಾಕ್ಷರತಾ ಕ್ಲಬ್‌ನ ಕಾರ್ಯದರ್ಶಿ ಬಿ.ಬಿ. ಲಲಿತ ಇದ್ದರು. ವಿವಿಧ ಕಾಲೇಜಿನ ೨೫ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆ ಪದವಿಪೂರ್ವ ಕಾಲೇಜಿನ ತರುಣ್ ಕುಮಾರ್ ಪ್ರಥಮ, ಸೋಮವಾರಪೇಟೆ ಕಾಲೇಜಿನ ಮದನ್ ದ್ವಿತೀಯ ಹಾಗೂ ತಾಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಕಾಲೇಜಿನ ಅಮೃತ್ ಮತ್ತು ಇಂಬ್ರಾನ್ ತೃತೀಯ ಸ್ಥಾನ ಪಡೆದರು.
ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕೂಡಿಗೆ ಕಾಲೇಜಿನ ಮೇಘನ (ಪ್ರ), ಸೋಮವಾರಪೇಟೆ ಕಾಲೇಜಿನ ಮದನ್ (ದ್ವಿ) ಹಾಗೂ ಬಿಟಿಸಿಜಿ ಕಾಲೇಜಿನ ರೇಷ್ಮ (ತೃ) ಸ್ಥಾನ ಗಳಿಸಿದರು.
ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಬಿಟಿಸಿಜಿ ಕಾಲೇಜಿನ ರಕ್ಷಿತ್ (ಪ್ರ), ಸೃಷ್ಟಿ (ದ್ವಿ) ಹಾಗೂ ಸೋಮವಾರಪೇಟೆ ಕಾಲೇಜಿನ ಕೀರ್ತನ (ತೃ) ಸ್ಥಾನ ಗಳಿಸಿದರು.
ಭಿತ್ತಿಪತ್ರ ರಚನೆ ಸ್ಪರ್ಧೆಯಲ್ಲಿ ಬಿಟಿಸಿಜಿ ಕಾಲೇಜಿನ ರಕ್ಷಿತ್ (ಪ್ರ), ಸಾಧನಾ (ದ್ವಿ) ಹಾಗೂ ಕೂಡಿಗೆ ಕಾಲೇಜಿನ ಜೀವಿತ (ತೃ) ಸ್ಥಾನ ಗಳಿಸಿದರು.