ವೀರಾಜಪೇಟೆ, ನ. ೯: ವಿದ್ಯುತ್ ತಂತಿ ದುರಸ್ತಿಪಡಿಸುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ವೀರಾಜಪೇಟೆಯ ಚೆಸ್ಕಾಂ ಸಿಬ್ಬಂದಿ ಮೃತಪಟ್ಟ ಘಟನೆ ನಡೆದಿದೆ.
ಆರ್ಜಿ ಸರಕಾರಿ ಶಾಲೆ ಸಮೀಪ ಗುರುವಾರ ಬೆಳಿಗ್ಗೆ ೯.೪೫ರ ವೇಳೆ ೧೧ ಕೆವಿ ವಿದ್ಯುತ್ ತಂತಿ ದುರಸ್ತಿಪಡಿಸುತ್ತಿರುವ ಸಂದರ್ಭ ಘಟನೆ ನಡೆದಿದ್ದು, ಒಂದು ಭಾಗದಲ್ಲಿ ತಂತಿ ತುಂಡಾಗಿ ಭೂಮಿಗೆ ವಿದ್ಯುತ್ ಪ್ರಹರಿಸಿ ಲೈನ್ಮ್ಯಾನ್ ಅನಿಲ್ಗೆ ವಿದ್ಯುತ್ ಸ್ಪರ್ಶಿಸಿದ್ದರಿಂದ ಕಾಲಿನ ಭಾಗ ಸುಟ್ಟು ಕರಕಲಾಗಿದೆ.
ಅನಿಲ್ ಕಳೆದ ೨೫ ವರ್ಷಗಳಿಂದ ವೀರಾಜಪೇಟೆ ವಲಯದಲ್ಲಿ ಲೈನ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿ, ಇದೀಗ ಮೆಕ್ಯಾನಿಕ್-೨ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
೧೧ ಕೆವಿ ವಿದ್ಯುತ್ ಸರಬರಾಜಾಗಲು ಲೈನ್ ಚಾರ್ಜ್ ಮಾಡುವ ಸಂದರ್ಭ ಇನ್ನೊಂದು ಭಾಗದ ೧೧ ಕೆವಿ ತಂತಿ ತುಂಡಾಗಿ ನೆಲಕ್ಕೆ ಬಿದ್ದಾಗ ವಿದ್ಯುತ್ ಗ್ರೌಂಡಿAಗ್ ಆಗಿ ಸುನಿಲ್ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ನಡೆದ ಅಪಘಾತವೊಂದರಲ್ಲಿ ಮೃತ ಅನಿಲ್ ಮೆನೆಜಸ್ ಅವರು ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದು, ದೀರ್ಘಕಾಲದ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ವೀರಾಜಪೇಟೆಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದ ಸಂದರ್ಭ ವಿದ್ಯುತ್ ಕಡಿತಗೊಂಡಿದ್ದ ಹಿನ್ನೆಲೆ ಅದನ್ನು ಸರಿಪಡಿಸಲು ಅನಿಲ್ ಬಂದಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುರೇಶ್, ಅಸಿಸ್ಟೆಂಟ್ ಇಂಜಿನಿಯರ್ ಟೆಕ್ನಿಕಲ್ ಹೆಚ್.ಎಲ್. ಸೋಮೇಶೇಖರ್, ಸಹಾಯಕ ಇಂಜಿನಿಯರ್ ಅಯ್ಯನ ಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.