ಮಡಿಕೇರಿ, ನ. ೯ : ಸಾಮಾನ್ಯವಾಗಿ ಆಧುನಿಕ ಯುಗದಲ್ಲಿ ಡಿಸ್ಕೋ ಸಂಗೀತಕ್ಕೆ ಜನ ಪ್ರಮುಖವಾಗಿ ಯುವ ಸಮೂಹ ಮಾರು ಹೋಗುತ್ತಾರೆ. ಶಾಸ್ತಿçÃಯ ಸಂಗೀತ ಅದರಲ್ಲೂ ವಾದ್ಯ ಸಂಗೀತಕ್ಕೆ ಅಷ್ಟಾಗಿ ಪ್ರೋತ್ಸಾಹ ದೊರಕುವುದಿಲ್ಲ ಎನ್ನುವ ಭಾವನೆಯಿದೆ. ಅದು ತಪ್ಪು ಕಲ್ಪನೆ ಎಂದು ಮಡಿಕೇರಿಯಲ್ಲಿ ಇಬ್ಬರು ಕಲಾವಿದರು ಸಾಬೀತುಪಡಿಸಿದರು. ಒಬ್ಬರು ತಮ್ಮ ಕೊಳಲ ನಾದದಿಂದ ಮತ್ತೊಬ್ಬರು ತಮ್ಮ ತಬಲ ಸಹಯೋಗದಿಂದ ಕುಳಿತಿದ್ದ ಪ್ರೇಕ್ಷಕರನ್ನು ಅದರಲ್ಲೂ ಮಕ್ಕಳನ್ನು ಮಂತ್ರ ಮುಗ್ಧರನ್ನಾಗಿಸಿದರು.
ಸೋಮವಾರ ಸಂಜೆ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರು ಕೊಳಲ ನಾದ ಲಹರಿ ಹರಿಸಿದರೆ, ಅವರ ಹಿರಿಯ ಸಹೋದರ ಕಿರಣ್ ಗೋಡ್ಕಿಂಡಿ ತಬಲ ವಾದನದ ಮೆರುಗು ನೀಡಿದರು.
ಸ್ಪಿಕ್ ಮೆಕೆ ಹಾಗೂ ಭಾರತೀಯ ವಿದ್ಯಾಭವನ ಸಂಸ್ಥೆಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರವೀಣ್ ಗೋಡ್ಕಿಂಡಿ ಅವರು ೩ ತರಹದ ಕೊಳಲುಗಳನ್ನು ನುಡಿಸಿದುದು ವಿಶೇಷವಾಗಿತ್ತು. ಸುಮಾರು ಒಂದೂವರೆ ಅಡಿ, ಇನ್ನೊಂದು ಸಾರ್ವತ್ರಿಕವಾಗಿ ನುಡಿಸುವ ೩ ಅಡಿ ಕೊಳಲು. ಹಿಂದೂಸ್ತಾನೀ ಬಾನ್ಸುರಿ ಎಂದು ಕರೆಯಲ್ಪಡುವ ಈ ಕೊಳಲಿನೊಂದಿಗೆ ಯು ವಿನ್ಯಾಸದ ಸುಮಾರು ೫ ಅಡಿಯ ಅವರೇ ತಯಾರಿಸಿದ “ಮಂದ್ರ ಬಾನ್ಸುರಿ” ಎಂಬ ಕೊಳಲನ್ನೂ ನುಡಿಸಿದರು. ಪ್ರವೀಣ್ ಅವರು ಈ ಬಗ್ಗೆ ಮಾಹಿತಿ ನೀಡುತ್ತ ತಾನು ೮ ಅಡಿಯ ಕೊಳಲನ್ನೂ ನುಡಿಸಿದ ಮೊದಲ ಕೊಳಲು ವಾದಕನಾಗಿದ್ದು, ಅದನ್ನು ನಿಂತು ನುಡಿಸುತ್ತೇನೆ ಎಂದು ಮಾಹಿತಿಯಿತ್ತರು. ಆ ಕೊಳಲು ಮತ್ತು ೩ ಅಡಿಯ ಕೊಳಲಿನ ನಡುವಿನ ಅಂತರದಲ್ಲಿ ಸುಮಾರು ೫ ಅಡಿಯ ಈ ಮಂದ್ರ ಬಾನ್ಸುರಿಯ ಮಹತ್ವವೆಂದರೆ ಕೆಳಗಿನ ಸಪ್ತÀಕಗಳನ್ನು ಸುಲಭವಾಗಿ ಬಾರಿಸಬಹುದಾಗಿದೆ ಎಂದು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಸರಕಾರಿ ಬಾಲಕರು ಮತ್ತು ಬಾಲಕಿಯರ ವಸತಿ ಗೃಹದ ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ವಿಶೇಷವಾಗಿ ಶಾಸ್ತಿçÃಯ ಸಂಗೀತ, ವಾದ್ಯ ಸಂಗೀತ , ಕೊಳಲು ವಾದನದ ಸಂದರ್ಭ ಉಸಿರನ್ನು ಹಿಡಿದು ಬಳಸುವ ಕ್ರಮದ ಕುರಿತು ಮಾಹಿತಿಯಿತ್ತರು. ಮಕ್ಕಳು ಈ ಕುರಿತು ವಿವಿಧ ಪ್ರಶ್ನೆಗಳನ್ನು ಕೇಳಿದರು. ಅಲ್ಲದೆ, ಕೊಳಲಿನ ನಾದಕ್ಕೆ ಮಕ್ಕಳೂ ಕೂಡ ಚಪ್ಪಾಳೆ, ತಾಳದ ಮೂಲಕ ನಾದ ಸೇರಿಸಿದುದು ವಿಶೇಷವಾಗಿತ್ತು. ದೇಶದ ಬೇರೆ ಬೇರೆ ಭಾಗಗಳಲ್ಲಿ ಒಂದೋ ಹಿಂದೂಸ್ತಾನೀ ಅಥವಾ ಕರ್ನಾಟಕ ಶಾಸ್ತಿçÃಯ ಸಂಗೀತ ಇವೆರಡರ ಪೈಕಿ ಒಂದಕ್ಕೆ ಮಾತ್ರ ಪ್ರೋತ್ಸಾಹವಿದೆ. ಆದರೆ, ಕರ್ನಾಟಕದ ವಿಶೇಷವೆಂದರೆ ಕರ್ನಾಟಕ ಶಾಸ್ತಿçÃಯ ಸಂಗೀತದೊAದಿಗೆ ಹಿಂದೂಸ್ತಾನೀ ಸಂಗೀತಕ್ಕೂ ಸಮಾನಾಂತರ ಮಾನ್ಯತೆ ಇರುವ ಏಕೈಕ ರಾಜ್ಯವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಮಡಿಕೇರಿ ನಗರ ಹಾಗೂ ಜಿಲ್ಲೆಯ ಕೆಲವು ಪ್ರಮುಖರು ಕೊಳಲು ವಾದನ ಕೇಳಲು ಆಗಮಿಸಿದ್ದು ನಾದ ಲಹರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಯನ ಕಶ್ಯಪ್ ಸ್ವಾಗತಿಸಿ, ವಂದಿಸಿದರು. ಕಶ್ಯಪ್ ಸ್ಮರಣಿಕೆ ನೀಡಿದರು.