ಕುಶಾಲನಗರ, ನ. ೯: ಸಮಾನತೆಯ ಸಮಾಜ ನಿರ್ಮಾಣ ಕ್ಕಾಗಿ ಹನ್ನೆರಡನೇ ಶತಮಾನದಲ್ಲಿಯೇ ಬಸವಾದಿ ಶರಣರು ಹೋರಾಟ ನಡೆಸಿದ್ದರಾದರೂ ೮೦೦ ವರ್ಷಗಳು ಕಳೆದರೂ ಇಂದಿಗೂ ಕೂಡ ಸ್ವಾಸ್ಥö್ಯ ಸಮಾಜ ಕಾಣುವಲ್ಲಿ ವಿಫಲರಾಗಿದ್ದೇವೆ ಎಂದು ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸುನಿಲ್ ಕುಮಾರ್ ವಿಷಾದಿಸಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಸ್ಥಳೀಯ ಕನ್ನಡ ಭಾರತಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ "ವಚನಗಳ ನಡಿಗೆ - ವಿದ್ಯಾರ್ಥಿಗಳ ಕಡೆಗೆ" ಚಿಂತನಾ ಗೋಷ್ಠಿಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಅವರು, ಶತ ಶತಮಾನಗಳಿಂದ ಅದೆಷ್ಟೋ ಆಡಳಿತಗಳು, ಸರ್ಕಾರಗಳು ಬಂದು ಹೋದರೂ ಕೂಡ ಜಾತಿ, ಧರ್ಮ, ವರ್ಣ, ಬೇಧಗಳ ತಾರತಮ್ಯ ದೂರವಾಗಿಲ್ಲ. ವಿದ್ಯಾವಂತರಿAದಲೇ ಸಮಾಜದಲ್ಲಿಂದು ಹೆಚ್ಚಿನ ಅಂತರಗಳು ಉಂಟಾಗುತ್ತಿವೆ. ಯುದ್ಧಗಳ ಹೆಸರಲ್ಲಿ ಮಕ್ಕಳಾದಿಯಾಗಿ ಜನರನ್ನು ಸಿಡಿಮದ್ದು ಗುಂಡುಗಳ ಸಿಡಿಸಿ ಅಮಾನುಷವಾಗಿ ಕೊಲ್ಲಲಾಗುತ್ತಿದೆ. ಒಳಿತು ಕೆಡುಕುಗಳ ಅವಲೋಕನ ಮಾಡುವಲ್ಲಿ ಇಂದು ನಾವು ಸೋತಿದ್ದೇವೆ ಎಂದರು. ಬುದ್ಧ - ಬಸವ, ಅಂಬೇಡ್ಕರ್, ಮಹಮದ್ ಪೈಗಂಬರ್, ಅಬ್ದುಲ್ ಕಲಾಂ, ಕನಕದಾಸ ಮೊದಲಾದ ಶ್ರೇಷ್ಠ ಸಾಧಕರ ಆದರ್ಶಗಳು ಹಾಗೂ ಅವರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ತಿಳಿಯಬೇಕಿದೆ. ಮಾನವ ಜನ್ಮ ಸಾರ್ಥಕಗೊಳಿಸಲು ಮೊದಲು ಮನಸ್ಸನ್ನು ಶುದ್ಧಗೊಳಿಸಿಕೊಳ್ಳಬೇಕಿದೆ.
ಸಕಲ ಜೀವಿಗಳಲ್ಲಿ ದಯೆ, ಪ್ರೀತಿ ಸಾಮರಸ್ಯ ಒಡಮೂಡಬೇಕಿದೆ. ಇದೇ ವಚನ ಸಾಹಿತ್ಯದ ಶ್ರೇಷ್ಠ ಮೌಲ್ಯ ಎಂದು ಅವರು ಹೇಳಿದರು. ಕೊಡಗು ವಿಶ್ವ ವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ. ಐ.ಕೆ. ಮಂಜುಳಾ ಚಿಂತನಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ವಚನ ಸಾಹಿತ್ಯದ ಅರಿವು ಬೆಳೆದಲ್ಲಿ ಅವರ ಬದುಕು ಶ್ರೇಷ್ಠವಾಗುತ್ತದೆ. ಆಧುನಿಕ ಜೀವನ ಶೈಲಿ ವಿದ್ಯಾರ್ಥಿಗಳಿಗೆ ಮಾರಕ ವಾಗಿರುವುದರಿಂದ ಸಾಹಿತಿಗಳು, ಚಿಂತಕರು ಸಾಧಕರ ಜೀವನ ಚರಿತ್ರೆಗಳನ್ನು ಓದುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವಂತೆ ಡಾ. ಮಂಜುಳಾ ಕರೆಕೊಟ್ಟರು.
ಪಿಯು ಕಾಲೇಜು ಪ್ರಾಂಶುಪಾಲ ಡಾ. ನಾಗೇಂದ್ರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಸ್ಥö್ಯ ಸಮಾಜದ ಕೈಗನ್ನಡಿಯಾದ ವಚನ ಸಾಹಿತ್ಯದ ಅರಿವು ಮರೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ‘ವಿದ್ಯಾರ್ಥಿಗಳೆಡೆಗೆ ವಚನಗಳ ನಡಿಗೆ’ ಒಂದು ಒಳ್ಳೆಯ ವೇದಿಕೆಯಾಗಿದೆ. ಹಾಗೆಯೇ ಶೈಕ್ಷಣಿಕ ರಾಜಧಾನಿ ಕುಶಾಲನಗರದಲ್ಲಿ ವಚನ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಮೂಲಕ ಜನಸಾಮಾನ್ಯರಲ್ಲಿ ವಚನಗಳ ವೈಭವವನ್ನು ಸೂರೆಗೊಳಿಸಲು ಕರೆಕೊಟ್ಟರು. ಕನ್ನಡ ಭಾರತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ, ಕುಶಾಲನಗರ ಪುರಸಭೆ ಮಾಜಿ ಅಧ್ಯಕ್ಷ ಜಯವರ್ಧನ, ಕನ್ನಡ ಭಾರತಿ ಪದವಿ ಕಾಲೇಜು ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ, ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಕೆ.ಬಿ. ಗಣೇಶ್, ಉಪನ್ಯಾಸಕ ಮಂಜುನಾಥ, ಮುರುಳಿ, ರಶ್ಮಿ ಇದ್ದರು.