ಐಗೂರು, ನ. ೧೮: ಅರೆಭಾಷೆ ಸಂಸ್ಕೃತಿ, ಆಚಾರ ವಿಚಾರ ಪದ್ಧತಿ ಉಳಿಯಬೇಕಾದರೆ ಐಗೂರು ಭಾಗದ ಅರೆಭಾಷೆ ಕುಲಬಾಂಧವರು ತಮ್ಮ ತಮ್ಮಲ್ಲಿ ಒಗ್ಗಟ್ಟನ್ನು ಬೆಳೆಸಿ ಈ ಭಾಗದ ಕಷ್ಟದಲ್ಲಿರುವ ಕುಲಬಾಂಧವರಿಗೆ ಸಹಾಯ ಹಸ್ತವನ್ನು ನೀಡಬೇಕೆಂದು ಬಿಎಸ್‌ಎನ್‌ಎಲ್ ಉಪಮಂಡಲ ಅಭಿಯಂತರರಾದ ಕೊಟ್ಟಕೇರಿಯನ ಲೀಲಾ ದಯಾನಂದ ಕರೆ ನೀಡಿದರು.

ಅವರು, ಅರೆಭಾಷೆ ಗೌಡ ಸಮಾಜದ ಐಗೂರಿನ ೭ನೇ ವರ್ಷದ ಕೈಲು ಮುಹೂರ್ತದ ಸಂತೋಷ ಕೂಟಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಭರತ್ ಕುಮಾರ್ ವಹಿಸಿದ್ದರು. ಭಾರನ ಸುರೇಶ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಮತ್ತೋರ್ವ ಅತಿಥಿ ಮೂಲೆಮಜಲು ಕಾಳಪ್ಪನವರು ಮಾತನಾಡಿ, ನಮ್ಮ ಸಂಸ್ಕೃತಿ ಆಚಾರ ಉಳಿಯಬೇಕಾದರೆ ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕೃತಿಯನ್ನು ಕಲಿಸಬೇಕೆಂದು ತಿಳಿಸಿದರು. ಸಮಾಜದ ವ್ಯಾಪ್ತಿಗೆ ಒಳಪಡುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಳೇರಮ್ಮನ ಸಾವಿತ್ರಿ ಪಾಲಾಕ್ಷ ಮತ್ತು ಚೆರಿಯಮನೆ ರಾಮಪ್ಪನವರು ಪ್ರೋತ್ಸಾಹ ಧನ ನೀಡಿದರು. ಗೌರವಾಧ್ಯಕ್ಷ ಪೊನ್ನಚ್ಚನ ಗಣಪತಿಯವರು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಚಿಲ್ಲನ ಮೋನಪ್ಪ, ಮಾಜಿ ಅಧ್ಯಕ್ಷ ಕಡ್ಲೆರ ಹೊನ್ನಪ್ಪ, ಬಾರನ ಪ್ರಮೋದ್, ಕೆ.ಪಿ. ರಾಯ್ ಮತ್ತು ಸಮಾಜ ಬಾಂಧವರು ಭಾಗವಹಿಸಿದ್ದರು.