ಗೋಣಿಕೊಪ್ಪ ವರದಿ, ನ. ೧೮: ಜೀವವೈವಿಧ್ಯ ಪ್ರದೇಶಗಳಲ್ಲಿ ಆರ್ಥಿಕತೆಯನ್ನು ಬಲಪಡಿಸಲು ಭೂದೃಶ್ಯ ಕಾಪಾಡಿಕೊಳ್ಳುವ ಚಿಂತನೆ ಅವಶ್ಯ ಎಂದು ರೈನ್ ಫಾರೆಸ್ಟ್ ಅಲಯನ್ಸ್ ಸಂಸ್ಥೆಯ ಹಿರಿಯ ಯೋಜನಾ ವ್ಯವಸ್ಥಾಪಕ ಅನಿರುದ್ಧ ಬ್ರಹ್ಮಚಾರಿ ಹೇಳಿದರು.

ಕೊಡಗು ಮೋಡೆಲ್ ಫಾರೆಸ್ಟ್ ಟ್ರಸ್ಟ್ ವತಿಯಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ವ್ಯವಸ್ಥೆ ಯೊಂದಿಗೆ ಸುಸ್ಥಿರ ಭೂದೃಶ್ಯ ನಿರ್ವಹಣೆ ಮತ್ತು ಸಾರ್ವಜನಿಕ-ಖಾಸಗಿ ಹಣಕಾಸು ಹೂಡಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸ್ಥಳೀಯ ಕೃಷಿ ಚಟುವಟಿಕೆಯಲ್ಲಿ ಪ್ರಗತಿ ಮತ್ತು ಆದ್ಯತೆ, ಭೂದೃಶ್ಯ ಮತ್ತು ಕೃಷಿ ಪ್ರಮಾಣದ ನಿರ್ವಹಣೆ ಕೂಡ ಅಗತ್ಯವಾಗಿದೆ. ಸ್ಥಳೀಯವಾಗಿ ಬಹು ಹೂಡಿಕೆದಾರರನ್ನು ಬಳಸಿ ಕೊಂಡು ಮುಂದುವರಿಯಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಯೋಜನೆಗೆ ಮುಂದಾಗಿದೆ. ಯುಎನ್‌ಇಪಿ, ಐಯುಸಿಎನ್, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಸೇರಿದಂತೆ ವಿವಿಧ ಪಾಲುದಾರರ ಭಾಗವಹಿಸುವಿಕೆಗೆ ಅವಕಾಶ ನೀಡಲಾಗಿದೆ. ಪರಿಸರ ಸಚಿವಾಲಯ, ಅರಣ್ಯ, ಹವಾಮಾನ ಇಲಾಖೆಗಳ ಮೂಲಕ ಸ್ಥಳೀಯ ಸಮುದಾಯಕ್ಕೆ ನೆರವಾಗಲಿದೆ. ಸಕಾರಾತ್ಮಕವಾಗಿ ಸ್ಪಂದಿಸುವ ಸಾರ್ವಜನಿಕರನ್ನು ಒಟ್ಟುಗೂಡಿಸುವ ಗುರಿ ಹೊಂದಿದೆ. ಲ್ಯಾಂಡ್‌ಸ್ಕೇಲ್ ಎಂದು ಕರೆಯಲ್ಪಡುವ ಭೂದೃಶ್ಯಗಳಿಗಾಗಿ ಪ್ರವರ್ತಕ ಕಾರ್ಯಕ್ಷಮತೆ ಮಾಪನ ಚೌಕಟ್ಟನ್ನು ಪರಿಚಯಿಸಲಾಗುತ್ತದೆ. ಕಾರ್ಯಕ್ಷಮತೆಯನ್ನು ಅಳೆಯಲು ಸಮಗ್ರ ವೇದಿಕೆಯಾಗಿದ್ದು, ರೈನ್‌ಫಾರೆಸ್ಟ್ ಅಲೈಯನ್ಸ್ ಮತ್ತು ಕನ್ಸರ್ವೇಶನ್ ಇಂಟರ್‌ನ್ಯಾಷನಲ್ ಸಂಸ್ಥೆ ಜಂಟಿಯಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂದು ತಿಳಿಸಿದರು.

ಅರಣ್ಯ ಮಹಾವಿದ್ಯಾಲಯ ಡಾ. ಜಿ.ಎಂ. ದೇವಗಿರಿ ಮಾತನಾಡಿ, ಕೊಡಗಿನ ಹವಾಮಾನ ವೈಪರಿತ್ಯ ಅವಲೋಕಿಸಿದಾಗ ಭೂದೃಶ್ಯ ಸಂರಕ್ಷಿಸುವ ಅನಿವಾರ್ಯತೆ ಎದುರಾಗಿದೆ ಎಂದರು.

ರೈನ್‌ಫಾರೆಸ್ಟ್ ಅಲೈಯನ್ಸ್ ತಜ್ಞ ಡಾ. ರಾಜಶೇಖರ ಮತ್ತು ಎಫ್‌ಇಎಸ್‌ನ ಕೌಶಲೇಂದ್ರ ರಾವ್ ನೇತೃತ್ವದಲ್ಲಿ ಭೂ ಬಳಕೆಯ ಮಾದರಿಗಳ ವಿಶ್ಲೇಷಣೆ ಮತ್ತು ಭೂದೃಶ್ಯ-ಮಟ್ಟದ ಸಮಸ್ಯೆಗಳನ್ನು ಗುರುತಿಸುವ ಮಾಹಿತಿ ನೀಡಲಾಯಿತು.

ರೈನ್‌ಫಾರೆಸ್ಟ್ ಅಲಯನ್ಸ್ ತಜ್ಞ ಡಾ. ದುಶ್ಶಾಸನ ಮಹಂತಾ ಲ್ಯಾಂಡ್‌ಸ್ಕೇಪ್ ಕಾರ್ಯಕ್ಷಮತೆ ಮಾಪನ ಪ್ರಕ್ರಿಯೆ ತಿಳಿಸಿದರು. ಪರಿಸರ ವ್ಯವಸ್ಥೆ, ಮಾನವ ಯೋಗಕ್ಷೇಮ, ಆಡಳಿತ ಮತ್ತು ಉತ್ಪಾದನೆ, ಪಶ್ಚಿಮ ಘಟ್ಟದ ಭೂದೃಶ್ಯಕ್ಕೆ ಸಹಕಾರಿ ಎಂದು ತಿಳಿಸಿದರು.

ಉಪಾಧ್ಯಕ್ಷ ಕರ್ನಲ್ ಸಿ. ಪಿ. ಮುತ್ತಣ್ಣ ಮಾತನಾಡಿ, ಭೂಮಿ ಅವನತಿಗೆ ಕಾರಣವಾಗುವ ವಾಣಿಜ್ಯ ವಿಸ್ತರಣೆ ನಿಯಂತ್ರಿಸಬೇಕಿದೆ. ಭೂದೃಶ್ಯ ರಕ್ಷಿಸಲು ಅಗತ್ಯ ನೀತಿ ಅವಶ್ಯ ಎಂದರು.

ಖಾಸಗಿ ಉದ್ಯಮ, ಸರ್ಕಾರೇತರ ಸಂಸ್ಥೆಗಳು, ಅರಣ್ಯ ಕಾಲೇಜು, ಕಾಫಿ ಮಂಡಳಿ, ಕೃಷಿ ಇಲಾಖೆ, ಟಾಟಾ ಕಾಫಿ ಪ್ರಮುಖರು ಸೇರಿದಂತೆ ಕಾಫಿ ಮಂಡಳಿ ಉಪ ನಿರ್ದೇಶಕಿ ಶ್ರೀದೇವಿ, ವಿಜ್ಞಾನಿ ಡಾ. ಚೇತನ್, ಮಾಡಲ್ ಪಾರೆಸ್ಟ್ ಟ್ರಸ್ಟ್ ಕಾರ್ಯದರ್ಶಿ ಚೆಪ್ಪುಡೀರ ಶೆರಿ ಸುಬ್ಬಯ್ಯ, ಜಂಟಿ ಕಾರ್ಯದರ್ಶಿ ಡಾ. ಸಿ.ಜಿ. ಕುಶಾಲಪ್ಪ, ಕಾರ್ಯದರ್ಶಿ ಎಸ್.ಬಿ. ಲೋಕೇಶ್, ಪ್ರಮುಖರಾದ ಡಾ. ಆರ್.ಎನ್. ಕೆಂಚರಡ್ಡಿ, ಡಾ. ಮಹೇಶ್ವರಪ್ಪ, ನಾಣಯ್ಯ ಇದ್ದರು.