ಮಡಿಕೇರಿ, ನ. ೧೮: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಮಡಿಕೇರಿ ತಾಲೂಕಿನ ಸರ್ಕಾರಿ-ಅನುದಾನಿತ-ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ೨೦೨೩-೨೪ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳು ತಾ. ೨೦ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ಆಯೋಜಿಸ ಲಾಗುವ ಜನಪದ ಗೀತೆ, ಆಶುಭಾಷಣ, ಪ್ರಬಂಧ, ಸ್ಥಳದಲ್ಲೇ ಪಾಠೋಪಕರಣಗಳ ತಯಾರಿಕೆ, ಸ್ಥಳದಲ್ಲೇ ಚಿತ್ರ ಬರೆಯುವುದು, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಶಿಕ್ಷಕರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ತಿಳಿಸಿದ್ದಾರೆ.
ಒಬ್ಬ ಶಿಕ್ಷಕರು ಒಂದು ಸ್ಪರ್ಧೆ ಯಲ್ಲಿ ಮಾತ್ರ ಭಾಗವಹಿಸಬಹುದು. ಪ್ರಥಮ ಸ್ಥಾನ ಪಡೆದ ಶಿಕ್ಷಕರು ಮಾತ್ರ ಮುಂದಿನ ಹಂತಕ್ಕೆ ಅರ್ಹ ರಾಗಿರುತ್ತಾರೆ.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಇದುವರೆಗೆ ನಡೆಸಲಾಗಿರುವ ರಾಜ್ಯ ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ, ಯಾವುದೇ ಶಿಕ್ಷಕರು ಒಂದು ಬಾರಿಯಾದರೂ ಪ್ರಥಮ ಸ್ಥಾನ ಗಳಿಸಿದ್ದಲ್ಲಿ, ಅದೇ ಶಿಕ್ಷಕರು ಪುನಃ, ಅದೇ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಭಾಗವಹಿಸಲು ಅವಕಾಶವಿರುವುದಿಲ್ಲ ಮತ್ತು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧೆಯನ್ನು ಹೊರತುಪಡಿಸಿ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ತಿಳಿಸಿದ್ದಾರೆ.