ಕೊಡ್ಲಿಪೇಟೆ, ನ. ೧೮: ಹೇಮಾವತಿ ಪುನರ್ ವಸತಿ ಯೋಜನೆಯಡಿ ರೂ. ೮೮ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಡಾ. ಮಂಥರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.

ಬೆಸೂರು ವೃತ್ತದಿಂದ ಕಟ್ಟೆಪುರದವರೆಗೆ ಹದೆಗೆಟ್ಟಿರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಹೇಮಾವತಿ ಪುನರ್ ವಸತಿ ಯೋಜನೆಯಡಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆ ತಯಾರಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಕ್ರಿಯಾ ಯೋಜನೆಯಂತೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದ ಅವರು, ರಸ್ತೆ ನಿರ್ಮಿಸಿ ಚರಂಡಿ ಕಾಮಗಾರಿ ಕೈಗೊಳ್ಳದ ಕಾರಣ ಅನೇಕ ಸ್ಥಳಗಳಲ್ಲಿ ರಸ್ತೆಗಳು ಕಿತ್ತುಹೋಗಿವೆ. ರಸ್ತೆಗಳ ಕ್ರಿಯಾ ಯೋಜನೆ ಮಾಡುವಾಗ ಕಾಂಕ್ರೀಟ್ ಚರಂಡಿಗಳನ್ನು ಕಡ್ಡಾಯವಾಗಿ ಅಳವಡಿಸಿ ವ್ಯವಸ್ಥಿತವಾಗಿ ರಸ್ತೆ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಅಂಭಿಯAತರರು ಗಮನ ಹರಿಸಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭ ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಸದಸ್ಯರಾದ ರಾಮು, ಕಿಶನ್, ಗೌರಮ್ಮ, ದಯಾಕರ, ಕಾರ್ಯದರ್ಶಿ ಆನಂದ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನೀಫ್, ಸದಸ್ಯರಾದ ಪಾವನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ, ಪ್ರಮುಖರಾದ ತೇಜ್ಕುಮಾರ್, ಜನಾರ್ದನ್, ಶರತ್‌ಶೇಖರ್, ಚೇತನ್, ಮಲ್ಲೇಶ್, ಹಾಲಪ್ಪ, ಬೆಟ್ಟಪ್ಪ, ಹೇಮಾವತಿ ನೀರಾವರಿ ಇಲಾಖೆಯ ಅಭಿಯಂತರ ಸಜಿತ್, ಇಂಜಿನಿಯರ್ ಹಾರೂನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.