ಮಡಿಕೇರಿ, ನ. ೧೮: ಸಹಕಾರ ಸಂಘಗಳು ರೈತರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತವೆ ಎಂದು ಅರಕಲಗೂಡು ಶಾಸಕ, ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ಜಿಲ್ಲಾ ನಿರ್ದೇಶಕ ಎ. ಮಂಜು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಇಲಾಖೆ, ಕರ್ನಾಟಕ ಇನ್ಸಿ÷್ಟಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಮಡಿಕೇರಿ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಗರದ ಬಾಲಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವ ದಿನಾಚರಣೆ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಪ್ರಾಯೋಜಿತ ‘ಕೊಡಗು ಸಹಕಾರ ರತ್ನ-ಶ್ರೇಷ್ಠ ಸಹಕಾರಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರಿಂದ ವಿಶೇಷ ತೃಪ್ತಿ ಸಿಗುತ್ತದೆ. ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣಿಗಳು ತೊಡಗಿಸಿ ಕೊಳ್ಳಬಾರದು; ರಾಜಕಾರಣಿಗಳು ತೊಡಗಿಸಿಕೊಳ್ಳುವುದರಿಂದ ಸಹಕಾರಿ ವ್ಯವಸ್ಥೆ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಹಾಳಾಗುತ್ತಿದೆ ಎಂದು ಮಂಜು ವಿಷಾದಿಸಿದರು. ಯಾವುದೇ ಸರ್ಕಾರಗಳಾದರೂ ರೈತರಿಗೆ ಸಹಾಯ ಧನಗಳ ಬದಲು ವಿದ್ಯುತ್, ನೀರು ಹಾಗೂ ಬೆಳೆಗೆ ಸೂಕ್ತ ಬೆಲೆ ನೀಡಿದರೆ ಸಾಕು ಇದು ಎಲ್ಲಾ ರೀತಿಯ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಈ ದಿಸೆಯಲ್ಲಿ ಸರ್ಕಾರಗಳು ಚಿಂತಿಸ ಬೇಕೆಂದು ಅವರು ಸಲಹೆಯಿತ್ತರು.
ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲು ಆಗಮಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ನಿರ್ದೇಶಕರು, ಸಹಕಾರ ರತ್ನ ಪ್ರಶಸ್ತಿ ವಿಜೇತರಾದ ಎಂ.ಬಿ. ದೇವಯ್ಯ ಮಾತನಾಡಿ, ಕೊಡಗಿನ ಮಣ್ಣು ಇಲ್ಲಿನ ಸಂಸ್ಕೃತಿಯ ಬಗ್ಗೆ ಅಭಿಮಾನ ಕಳೆದುಕೊಂಡರೆ ಕೊಡಗಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು. ಸಹಕಾರ ಕ್ಷೇತ್ರ ಬೆಳೆಯಬೇಕಾದರೆ ರೈತರ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ರೈತರಿಗೆ ಸೂಕ್ತ ಅನುಕೂಲಗಳನ್ನು ಕಲ್ಪಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕೆಂದರು. ಸರ್ಕಾರದ ಮಟ್ಟದಲ್ಲಿ ನೀಡಲಾಗುವ ಸಹಕಾರ ರತ್ನ ಪ್ರಶಸ್ತಿ ಬೇಕಾಬಿಟ್ಟಿಯಾಗಿ ಕೊಡಲ್ಪಡುತ್ತಿದ್ದು, ಪ್ರಶಸ್ತಿಯೂ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ದೇವಯ್ಯ ವಿಷಾದಿಸಿದರು.
ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲು ಪಾಲ್ಗೊಂಡಿದ್ದ ಮತ್ತೋರ್ವ ಅತಿಥಿ ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕರು, ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಜಿ. ರಾಜೇಂದ್ರ ಅವರು ಮಾತನಾಡಿ, ಕೊಡಗಿನ ಸಹಕಾರ ಕ್ಷೇತ್ರ ಹೆಸರುವಾಸಿಯಾಗಿದ್ದು, ಕೊಡಗಿನ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಸಹಕಾರ ಕ್ಷೇತ್ರ ಇಲ್ಲದಿದ್ದರೆ ರೈತರು ಸಾಕಷ್ಟು ಬವಣೆಗಳನ್ನು ಎದುರಿಸಬೇಕಾಗುತ್ತಿತ್ತು ಎಂದ ಅವರು, ಸಹಕಾರ ಸಂಘಗಳು ನೀಡುವ ಕಡಿಮೆ ಬಡ್ಡಿಯ ಸಾಲ, ಕಡಿಮೆ ದರದಲ್ಲಿ ವಿತರಿಸುವ ಕೃಷಿ ಪರಿಕರಗಳು ರೈತರನ್ನು ಬೆಳೆಗಾರರನ್ನು ಉಳಿಸಿವೆ ಎಂದು ಅಭಿಪ್ರಾಯಿಸಿದರು. ಸಹಕಾರಿ ಕಾನೂನಿನಡಿ ಸಹಕಾರ ಸಂಘಗಳ ರಚನೆಯಿಂದ ಸಂಘದಲ್ಲಾಗುವ ದುರುಪಯೋಗ ಗಳನ್ನು ತಡೆಯಬಹುದಾಗಿದೆ. ಸಹಕಾರ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ ರಾಜೇಂದ್ರ ಅವರು ಸಹಕಾರ ಕ್ಷೇತ್ರದ ಬೆಳವಣಿಗೆಗಾಗಿ ಸಂಘಟಿತ ಹೋರಾಟ ಮುಖ್ಯ ಎಂದು ಹೇಳಿದರು.
ಕೊಡಗು ಜಿಲ್ಲೆಯ ನಿರ್ಲಕ್ಷö್ಯ
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಎ.ಕೆ. ಮನುಮುತ್ತಪ್ಪ, ರಾಜ್ಯಮಟ್ಟದಲ್ಲಿ ಕೊಡಗಿನ ಸಹಕಾರಿ ಕ್ಷೇತ್ರದ ಸಾಧಕರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಕೊಡಗಿನಲ್ಲಿರುವ ಎಲ್ಲಾ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಸಹಕಾರ ರತ್ನ ಪುರಸ್ಕಾರಕ್ಕೆ ಕೊಡಗು ಜಿಲ್ಲೆ ಪರಿಗಣಿಸಲ್ಪಡುತ್ತಿಲ್ಲ. ಕೊಡಗಿನಿಂದ ಕೆಲವು ಮಂದಿ ಮಾತ್ರ ಸರ್ಕಾರದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿಯಮದ ಪ್ರಕಾರ ೮ ಪ್ರಶಸ್ತಿಗಳನ್ನು ಮಾತ್ರ ನೀಡಬೇಕು. ಆದರೆ ನೂರಕ್ಕೂ ಅಧಿಕ ಮಂದಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ಸರ್ಕಾರ ನೀಡುತ್ತಿದ್ದು, ಪ್ರಶಸ್ತಿಗಳು ರಾಜಕೀಯ ಪ್ರೇರಿತವಾಗುತ್ತಿರುವುದು ದುಃಖಕರ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಕೊಳಕೇರಿಯ ಬಿದ್ದಾಟಂಡ ಎ. ರಮೇಶ್ ಚಂಗಪ್ಪ ಅವರಿಗೆ ಕೊಡಗು ಸಹಕಾರ ರತ್ನ ಪ್ರಶಸ್ತಿ ನೀಡಲಾಯಿತು. ಮಡಿಕೇರಿಯ ಕೊಂಗAಡ ಎ. ತಿಮ್ಮಯ್ಯ, ಪೊನ್ನಂಪೇಟೆಯ ಚೆರಿಯಪಂಡ ಕೆ. ಉತ್ತಪ್ಪ, ನಿಡ್ತ ಗ್ರಾಮದ ಎಚ್.ಎಸ್. ಸುಬ್ಬಪ್ಪ ಇವರುಗಳಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ವಿತರಿಸಲಾಯಿತು. ಮಡಿಕೇರಿಯ ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ ಅವರಿಗೆ ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ವಿಜೇತರುಗಳು ತಮ್ಮ ಸೇವಾ ಅನುಭವಗಳನ್ನು ಹಂಚಿಕೊAಡರು.
ದಿನದ ಮಹತ್ವದ ಕುರಿತು ಮಾತನಾಡಿದ ಮಡಿಕೇರಿಯ ಕೆ.ಐ.ಸಿ.ಎಂ. ಪ್ರಾಂಶುಪಾಲೆ ಡಾ.ಆರ್.ಎಸ್. ರೇಣುಕಾ, ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಸಾವಿರಾರು ಕೋಟಿ ಅನುದಾನವನ್ನು ಮೀಸಲಿಟ್ಟು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ನ ಉಪಾಧ್ಯಕ್ಷ ಪಿ.ಸಿ. ಮನುರಾಮಚಂದ್ರ, ನಿರ್ದೇಶಕರುಗಳಾದ ಎನ್.ಎ. ರವಿಬಸಪ್ಪ, ಕೆ.ಎ. ಸಂಪತ್, ಪ್ರೇಮ ಸೋಮಯ್ಯ, ಸಿ.ಎಸ್. ಕೃಷ್ಣ ಗಣಪತಿ, ಪಿ.ವಿ. ಭರತ್, ವಿ.ಕೆ. ಅಜಯ್ ಕುಮಾರ್, ಎನ್.ಎಂ. ಉಮೇಶ್ ಉತ್ತಪ್ಪ, ಪಿ.ಬಿ. ಯತೀಶ್, ಸಹಕಾರ ಸಂಘಗಳ ಉಪನಿಬಂಧಕರಾದ ಎಂ.ಎಸ್. ಕೃಷ್ಣಪ್ರಸಾದ್ ಇತರರಿದ್ದರು.
ಸಹಕಾರ ಯೂನಿಯನ್ ವ್ಯವಸ್ಥಾಪಕರಾದ ಆರ್. ಮಂಜುಳಾ ಪ್ರಾರ್ಥಿಸಿ, ನಿರ್ದೇಶಕ ಕೆ.ಎಂ. ತಮಯ್ಯ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.