ಕುಶಾಲನಗರ, ನ. ೧೯: ಅಧಿಕಾರಿಗಳು ಜನಪರ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಮಡಿಕೇರಿ ಕ್ಷೇತ್ರದ ವಿಧಾನಸಭಾ ಶಾಸಕ ಡಾ. ಮಂಥರ್ ಗೌಡ ಸೂಚನೆ ನೀಡಿದರು.
ಕುಶಾಲನಗರದ ಮುಳ್ಳುಸೋಗೆ ಹಳೆಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಶಾಸಕರ ಭವನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳು ಮತ್ತು ಕಾರ್ಯಕರ್ತರು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಬೇಕು. ಸರಕಾರದ ಯೋಜನೆಗಳನ್ನು ಎಲ್ಲಾ ಹಂತಗಳಿಗೆ ತಲುಪಿಸಬೇಕು. ವಾರದಲ್ಲಿ ಪ್ರತಿ ಮಂಗಳವಾರ ಶಾಸಕರ ಕಚೇರಿಯಲ್ಲಿ ತಾನು ಜನರ ಅಹವಾಲು ಸ್ವೀಕರಿಸಲಿದ್ದು, ಕಚೇರಿಯಲ್ಲಿ ನಿತ್ಯ ತನ್ನ ಆಪ್ತ ಸಹಾಯಕರು ನಾಗರಿಕರ ದೂರನ್ನು ಸ್ವೀಕರಿಸಲಿದ್ದಾರೆ ಎಂದರು.
ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳುವ ಚಿಂತನೆ ಹರಿಸಿದ್ದೇನೆ ಎಂದು ಅವರು ಹೇಳಿದರು. ಶಾಸಕರ ಕಚೇರಿ ಮೂಲಕ ಸಮಸ್ಯೆಗೆ ನೇರವಾಗಿ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಆರೋಗ್ಯ ಅಧಿಕಾರಿ ಉದಯಕುಮಾರ್, ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಸೆಸ್ಕಾಂ ಅಧಿಕಾರಿ ವಿನಯ್ ವಿವಿಧ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಪ್ರಮುಖರಾದ ವಿ.ಪಿ. ಶಶಿಧರ್ ಕೆ.ಪಿ. ಚಂದ್ರಕಲಾ, ಪ್ರಮೋದ್ ಮುತ್ತಪ್ಪ, ಕೆ.ಕೆ. ಮಂಜುನಾಥ್ ಕುಮಾರ್, ನಟೇಶ್ ಗೌಡ, ಕುಶಾಲನಗರ ಪುರಸಭೆ ಸದಸ್ಯರಾದ ಕಲೀಮುಲ್ಲಾ, ದಿನೇಶ್ ಮತ್ತು ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಜನಪ್ರತಿನಿಧಿಗಳು ಇದ್ದರು.