ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು

ಬೆಂಗಳೂರು, ನ. ೧೯: ರಸ್ತೆಯಲ್ಲಿ ತೆರಳುತ್ತಿದ್ದಾಗ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ ೯ ತಿಂಗಳ ಮಗು ಸ್ಥಳದಲ್ಲೇ ದುರ್ಮರಣಗೊಂಡು ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೋಪ್ ಫಾರ್ಮ್ ಜಂಕ್ಷನ್ ಬಳಿ ಭಾನುವಾರ ನಡೆದಿದೆ. ಮೃತರನ್ನು ಎಕೆಜಿ ಕಾಲೋನಿ ನಿವಾಸಿಗಳಾದ ಸೌಂದರ್ಯ ಮತ್ತು ಸುವೀಕ್ಷಾ ಎಂದು ಗುರುತಿಸಲಾಗಿದೆ, ಇಂದು ಮುಂಜಾನೆ ೬ ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ತಾಯಿ ಮಗುವಿನೊಂದಿಗೆ ವೈಟ್‌ಫೀಲ್ಡ್ನ ಕಾಡುಗೋಡಿಯಲ್ಲಿ ಬಸ್ ಇಳಿದು ನಡೆದುಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ಕರೆಂಟ್‌ವೈರ್‌ನ್ನು ಕಾಣದೇ ತುಳಿದಿದ್ದಾರೆ. ಕ್ಷಣಾರ್ಧದಲ್ಲಿ ವಿದ್ಯುತ್ ಪ್ರವಹಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸೌಂದರ್ಯ ಅವರ ಪತಿ ವಿದ್ಯುತ್ ಸ್ಪರ್ಶದಿಂದ ಪಾರಾಗಿದ್ದಾರೆ. ಘಟನೆಗೆ ಸಂಬAಧಿಸಿದAತೆ ಬೆಸ್ಸಾಂ ಎಇ, ಎಇಇಯನ್ನು ಅಮಾನತುಗೊಳಿಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಈ ಸಂಬAಧ ಟ್ವೀಟ್ ಮಾಡಿರುವ ಸಚಿವರು, ಈ ದುರ್ಘಟನೆಯಲ್ಲಿ ಸಂಬAಧಿಕರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ತಲಾ ರೂ. ೫ ಲಕ್ಷ ಪರಿಹಾರ ನೀಡಲಿದೆ ಎಂದು ತಿಳಿಸಿದ್ದಾರೆ.

ದರ್ಗಾ ಪ್ರಸಾದ ಸೇವಿಸಿ ೫೦ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ರಾಮನಗರ, ನ. ೧೯: ದರ್ಗಾದ ಪ್ರಸಾದ ಸೇವಿಸಿ ರಾಮನಗರದಲ್ಲಿ ೫೦ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಯಾರಬ್ ನಗರದಲ್ಲಿನ ಪೀರನ್ ಷಾ ವಲಿ ದರ್ಗಾದಲ್ಲಿ ಉರುಸ್ ಪ್ರಯುಕ್ತ ಪ್ರಸಾದ ವಿತರಣೆ ಮಾಡಲಾಗಿತ್ತು. ಈ ಪ್ರಸಾದ ಸೇವಿಸಿದ ಬಳಿಕ ೫೦ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಶುರುವಾಗಿ ಅಸ್ವಸ್ಥರಾಗಿದ್ದಾರೆ. ದರ್ಗಾದಲ್ಲಿ ಮಧ್ಯಾಹ್ನ ಮಲಿದಾ ಎಂಬ ಸಿಹಿ ಪದಾರ್ಥವನ್ನು ನೀಡಲಾಗಿತ್ತು. ಸಿಹಿ ತಿಂಡಿಯಲ್ಲಿ ವಿಷಕಾರಿ ಅಂಶ ಇದ್ದಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಸ್ವಸ್ಥಗೊಂಡ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಕೆಲವರು ನಿತ್ರಾಣಗೊಂಡಿದ್ದಾರೆ. ರಾಮನಗರ ಪೊಲೀಸರು ಮಲಿದಾ ಸಿಹಿ ತಿಂಡಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕೂಡಲೇ ಇನ್ನಷ್ಟು ಬೆಡ್ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ತಾಕೀತು ಮಾಡಿದ್ದಾರೆ.

ಬರ ನಿರ್ವಹಣೆಗೆ ಕ್ರಮ : ಕಾರ್ಯಪಡೆ ರಚನೆ

ಬೆಂಗಳೂರು, ನ. ೧೯: ರಾಜ್ಯ ಸರ್ಕಾರವು ಬರ ನಿರ್ವಹಣೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ಬರಪೀಡಿತ ೨೨೩ ತಾಲೂಕುಗಳಲ್ಲಿ ಪರಿಹಾರ ಕಾರ್ಯಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವರು, ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಖಾಸಗಿ ಕೊಳವೆ ಬಾವಿ ಬಳಸಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ೭ ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ರೈತರಿಗೆ ವಿತರಿಸಲಾಗುತ್ತಿದೆ. ಗಡಿ ಜಿಲ್ಲೆಗಳಿಂದ ಮೇವು ಸಾಗಣೆ ನಿಲ್ಲಿಸಲು, ರಾಜ್ಯದಿಂದ ಹೊರ ರಾಜ್ಯಗಳಿಗೆ ಹೋಗುವುದನ್ನು ನಿರ್ಬಂಧಿಸಲು ನಿರ್ಣಯಿಸಲಾಗಿದೆ ಎಂದು ಹೇಳಿದ್ದಾರೆ. ಬರಪೀಡಿತ ೨೨೩ ತಾಲೂಕುಗಳಲ್ಲಿ ಪರಿಹಾರ ಕಾರ್ಯಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ. ಪರಿಹಾರ ಕಾರ್ಯಗಳಿಗೆ ೩೨೫ ಕೋಟಿ ಹೆಚ್ಚುವರಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ೩೭೮೩ ಕೋಟಿ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ಯಾಲೆಸ್ತೇನ್ ಪ್ರೇಮಿಯಿಂದ ಭದ್ರತೆ ಉಲ್ಲಂಘನೆ

ಅಹ್ಮದಾಬಾದ್, ನ. ೧೯: ಅಹ್ಮದಾಬಾದ್‌ನಲ್ಲಿ ನಡೆದ ಐಸಿಸಿ ೨೦೨೩ ವಿಶ್ವಕಪ್ ಪಂದ್ಯದಲ್ಲಿ ಪ್ಯಾಲೆಸ್ತೇನ್ ಅಭಿಮಾನಿಯೋರ್ವ ಬಿಗಿ ಭದ್ರತೆಯ ನಡುವೆಯೂ ಕ್ರಿಕೆಟ್ ಮೈದಾನಕ್ಕೆ ನುಗ್ಗಿ ಕೊಹ್ಲಿಯತ್ತ ಧಾವಿಸಿದ ಘಟನೆ ನಡೆದಿದೆ. ಮೊದಲ ವಿರಾಮಕ್ಕೂ ಮುನ್ನ ಈ ಆತಂಕಕಾರಿ ಘಟನೆ ವರದಿಯಾಗಿದೆ. ಭದ್ರತಾ ಸಿಬ್ಬಂದಿಗಳು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಆತನನ್ನು ಚೀನಾ-ಫಿಲಿಪಿನೋ ಮೂಲದ ಆಸ್ಟೆçÃಲಿಯಾ ವ್ಯಕ್ತಿ ವೇಯ್ನ್ ಜಾನ್ಸನ್ ಎಂದು ಗುರುತಿಸಲಾಗಿದೆ. ವೇಯ್ನ್ ಜಾನ್ಸನ್ ನ್ನು ಬಂಧಿಸಿ ಚಾಂದ್ ಖೇಡಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಜಾನ್ಸನ್ ಪ್ಯಾಲೆಸ್ತೀನ್ ಧ್ವಜದ ವಿನ್ಯಾಸದ ಮಾಸ್ಕ್ ಮತ್ತು ಎರಡೂ ಬದಿಗಳಲ್ಲಿ ಸ್ಲೋಗನ್‌ಗಳನ್ನು ಹೊಂದಿದ್ದ ಟಿ-ಶರ್ಟ್ನ್ನು ಧರಿಸಿದ್ದ. ಟೀ-ಶರ್ಟ್ನ ಮುಂಭಾಗದಲ್ಲಿ, ‘ಪ್ಯಾಲೆಸ್ಟೈನ್ ಬಾಂಬ್ ಸ್ಫೋಟವನ್ನು ನಿಲ್ಲಿಸಿ' ಎಂದು ಮತ್ತು ಹಿಂಭಾಗದಲ್ಲಿ, 'ಪ್ಯಾಲೆಸ್ತೀನ್ ಉಳಿಸಿ' ಎಂದು ಬರೆಯಲಾಗಿತ್ತು. ಆತ ಹಠಾತ್ ಒಳನುಗ್ಗಿದ್ದು, ಭದ್ರತಾ ಸಿಬ್ಬಂದಿಗಳು ಆತನನ್ನು ತ್ವರಿತವಾಗಿ ಬಂಧಿಸಿದ್ದಾರೆ.

೨೨ ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

ರಾಮನಾಥಪುರA, ನ. ೧೯: ಐಎಂಬಿಎಲ್ ಉಲ್ಲಂಘಿಸಿದ ಆರೋಪದ ಮೇಲೆ ರಾಮನಾಥಪುರಂನ ಪಂಬನ್ ಪ್ರದೇಶದಿಂದ ಬಂದ ಎರಡು ದೋಣಿಗಳಲ್ಲಿದ್ದ ೨೨ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಚಂಡಮಾರುತದ ಎಚ್ಚರಿಕೆಯಿಂದಾಗಿ ಹಲವು ದಿನಗಳ ನಂತರ ಶನಿವಾರ ಮೀನುಗಾರರು ಸಮುದ್ರಕ್ಕೆ ಇಳಿದಿದ್ದಾರೆ. ನವೆಂಬರ್ ೧೫ರಂದು ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ದೋಣಿಗಳು ಐಎಂಬಿಎಲ್ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರಿದ್ದ ದೋಣಿಗಳನ್ನು ಅಲ್ಲಿಂದ ಓಡಿಸಿತು. ಆದರೆ, ಅವುಗಳ ಪೈಕಿ ಎರಡು ದೋಣಿಗಳು ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ಮುಂದುವರಿಸಿವೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮವಾಗಿ, ಉತ್ತರ ನೌಕಾ ಕಮಾಂಡ್ ಪಾಯಿಂಟ್ ಪೆಡ್ರೊದ ಲಂಕಾದ ನೀರಿನಲ್ಲಿ ಮೀನುಗಾರಿಗೆ ಮಾಡಿದ ಆರೋಪದ ಮೇಲೆ ೨೨ ಮೀನುಗಾರರನ್ನು ಬಂಧಿಸಿದೆ. ಒಂದು ದೋಣಿ ೧೦ ಜನರನ್ನು ಹೊತ್ತೊಯ್ದರೆ, ಇನ್ನೊಂದು ೧೨ ಜನರನ್ನು ಹೊತ್ತೊಯ್ದಿತ್ತು. ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತ ಮೀನುಗಾರರನ್ನು ಜಾಫ್ನಾ ಬಂದರಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಮುಂದಿನ ಕ್ರಮಗಳಿಗಾಗಿ ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸಲಾಯಿತು.

ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಐವರು ಪೊಲೀಸರ ಸಾವು

ಜೈಪುರ, ನ. ೧೯: ಭಾನುವಾರ ಮುಂಜಾನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಿಂತಿದ್ದ ಟ್ರಕ್‌ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಐವರು ಪೊಲೀಸರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಸುಜನ್‌ಗಢ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಚುರು ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ನಾಯಕ್ ತಿಳಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆಂದು ಪೊಲೀಸರು ತಾರಾನಗರಕ್ಕೆ ತೆರಳುತ್ತಿದ್ದರು. ಮೃತರನ್ನು ಖಿಂವ್ಸರ್ ಪೊಲೀಸ್ ಠಾಣೆಯ ಎಎಸ್‌ಐ ರಾಮಚಂದ್ರ, ಕಾನ್‌ಸ್ಟೆಬಲ್‌ಗಳಾದ ಕುಂಭರಾಮ್, ಸುರೇಶ್ ಮೀನಾ, ಥನರಾಮ್ ಮತ್ತು ಮಹೇಂದ್ರ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.

ಮಕ್ಕಳ ಆಟಿಕೆ ಮಳಿಗೆಯಲ್ಲಿ ಭೀಕರ ಅಗ್ನಿ ಅವಘಡ

ಬೆಂಗಳೂರು, ನ. ೧೯: ಬೆಂಗಳೂರಿನ ಕುಂಬಾರಪೇಟೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮಕ್ಕಳ ಆಟಿಕೆ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೆಆರ್ ಮಾರುಕಟ್ಟೆ ಸಮೀಪದಲ್ಲಿರುವ ಕುಂಬಾರಪೇಟೆಯಲ್ಲಿರುವ ಮಕ್ಕಳ ಆಟದ ಸಾಮಾನು, ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟದ ಮಳಿಗೆಯ ಮೂರನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನೋಡ ನೋಡುತ್ತಲೇ ಬೆಂಕಿಯ ಕೆನ್ನಾಲಿಗೆ ೬ನೇ ಮಹಡಿವರೆಗೂ ಹಬ್ಬಿದೆ. ಐದು ವಾಹನಗಳಲ್ಲಿ ಬಂದ ೩೦ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ.