ಮಡಿಕೇರಿ, ನ. ೧೯: ಚಿತ್ರಕಲೆ ಮಕ್ಕಳ ಭಾವನೆ ಮತ್ತು ಕಲ್ಪನೆಯನ್ನು ಅನಾವರಣಗೊಳಿಸಬಲ್ಲ ಉತ್ತಮ ಕಲಾ ಪ್ರಕಾರ ವಾಗಿದೆ. ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದ್ದಾರೆ.

ಮಡಿಕೇರಿಯ ಮಹದೇವಪೇಟೆಯ ಎಸ್‌ಎಸ್ ಆಸ್ಪತ್ರೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಕ್ರೆಸೆಂಟ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರಕಲೆಗೆ ದೊಡ್ಡ ಇತಿಹಾಸವಿದೆ, ಈ ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಮಕ್ಕಳಲ್ಲಿರುವ ಚಿತ್ರಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಈ ರೀತಿಯ ಸ್ಪರ್ಧೆಗಳು ಹೆಚ್ಚು ಸಹಕಾರಿಯಾಗಿದೆ. ಮಕ್ಕಳ ದಿನಾಚರಣೆಯ ಹಿನ್ನೆಲೆ ಎಸ್‌ಎಸ್ ಆಸ್ಪತ್ರೆ ಅತಿ ಕಾಳಜಿಯಿಂದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಿಲ್ಪ ಸತೀಶ್ ಅವರು, ಪ್ರತಿವರ್ಷ ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಮೆಡಿಕಲ್ ಕಾಲೇಜ್‌ನ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಗೋಪಾಲ್ ಎಂ.ಎಸ್ ಅವರು, ಎಲ್ಲಾ ಸಮಾಜ ಮತ್ತು ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಇದೊಂದು ಉತ್ತಮ ಪ್ರಯತ್ನವಾಗಿದ್ದು, ಪ್ರತಿಭೆಗಳನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

ಮೆಡಿಕಲ್ ಕಾಲೇಜ್‌ನ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸತೀಶ್ ಶಿವಮಲ್ಲಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರಾದ ಕಲಾವತಿ, ಎಎಲ್‌ಜಿ ಕ್ರೆಸೆಂಟ್ ಸ್ಕೂಲ್‌ನ ಟ್ರಸ್ಟಿ ಹಾಗೂ ನಿರ್ದೇಶಕ ಹನೀಫ್, ಶಾಲೆಯ ಉಪಪ್ರಾಂಶುಪಾಲರಾದ ಸುಲ್ಲಾಹ್ತ್, ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಗುರುನಾಥ ಪಾಲ್ಗೊಂಡಿದ್ದರು.

ತೇಜಶ್ರೀ, ರಶ್ಮಿ ಹಾಗೂ ಶ್ರದ್ಧಾ ಕಟ್ಟೆಮಾಡು ಪ್ರಾರ್ಥಿಸಿ, ಆರ್.ಕೆ ಲ್ಯಾಬ್ ಮಾಲೀಕರಾದ ಪ್ರದೀಪ್ ಕುಮಾರ್ ಕೆ.ಎಸ್ ಸ್ವಾಗತಿಸಿ, ತೇಜಸ್ ಗೌಡ ಹಾಗೂ ದಿಲೀಪ್ ನಿರೂಪಿಸಿ, ಆರ್.ಕೆ ಲ್ಯಾಬ್ ನ ವ್ಯವಸ್ಥಾಪಕ ನಿರ್ದೇಶಕರಾದ ಕವಿತಾ ಪ್ರದೀಪ್ ಕುಮಾರ್ ವಂದಿಸಿದರು.

ಎಸ್‌ಎಸ್ ಆಸ್ಪತ್ರೆಯ ಸಿಬ್ಬಂದಿಗಳಾದ ಧರ್ಮಾವತಿ, ಹರ್ಷಿತಾ, ಮಾನಸ, ಅಕ್ಷಿತಾ ಹಾಗೂ ಚುಮ್ಮಿ ಉಪಸ್ಥಿತರಿದ್ದರು.

ವಿಜೇತರ ವಿವರ: ಎಲ್‌ಕೆಜಿಯಿಂದ ೧ನೇ ತರಗತಿವರೆಗಿನ ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಥಮ ಬಹುಮಾನ (ರೂ.೨ಸಾವಿರ) ದುಹಾ ಫಾತಿಮಾ ಯುಕೆಜಿ ಎಎಲ್‌ಜಿ ಕ್ರೆಸೆಂಟ್ ಶಾಲೆ, ದ್ವಿತೀಯ (೧,೫೦೦ ರೂ.) ರಿಥ್ವಿಕ್, ೧ನೇ ತರಗತಿ ಕೇಂದ್ರೀಯ ವಿದ್ಯಾಲಯ ಕೊಡಗು, ತೃತೀಯ ಬಹುಮಾನ (೧ಸಾವಿರ ರೂ.) ಶೌರ್ಯ ಕುಶಾಲಪ್ಪ ಎಲ್‌ಕೆಜಿ, ಕೊಡಗು ವಿದ್ಯಾಲಯ ಪಡೆದುಕೊಂಡರು.

೨ನೇ ತರಗತಿಯಿಂದ ೬ನೇ ತರಗತಿ ವರೆಗಿನ ವಿಭಾಗದಲ್ಲಿ ಪ್ರಥಮ ಬಹುಮಾನ (೩,೫೦೦ ರೂ.) ಬಿನೀತ್ ಕೆ.ಪಿ. ೬ನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್, ದ್ವಿತೀಯ ಬಹುಮಾನ (ರೂ.೩ಸಾವಿರ) ಎಂ.ಆರ್. ಕಿರಣಕಾಂತ್, ೫ನೇ ತರಗತಿ ಕೇಂದ್ರೀಯ ವಿದ್ಯಾಲಯ, ತೃತೀಯ ಬಹುಮಾನ (೨,೫೦೦ ರೂ.) ಬಾನ್ವಿ ಕೆ.ಎಸ್., ೬ನೇ ತರಗತಿ, ಸಂತ ಮೈಕಲರ ಶಾಲೆ ಪಡೆದುಕೊಂಡರು.

೭ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿಭಾಗದಲ್ಲಿ ಪ್ರಥಮ ಬಹುಮಾನ (೫ ಸಾವಿರ ರೂ.) ಹರ್ಷಿತ್ ಪೊನ್ನಪ್ಪ ೮ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ, ದ್ವಿತೀಯ ಬಹುಮಾನ (೪,೫೦೦ ರೂ.) ಮೌಲ್ಯ ಜಿ.ಪಿ., ೯ನೇ ತರಗತಿ, ಸಂತ ಜೋಸೆಫರ ಶಾಲೆ ಮಡಿಕೇರಿ, ತೃತೀಯ ಬಹುಮಾನ (೪ ಸಾವಿರ ರೂ.) ಧ್ರುವ ನಂಜಪ್ಪ ೯ನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಪಡೆದುಕೊಂಡರು.

ಪ್ರತಿ ವಿಜೇತರಿಗೆ ನಗದು ಬಹುಮಾನದೊಂದಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಸುಮಾರು ೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಎಲ್ಲರಿಗೂ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.