ಐಗೂರು, ನ. ೧೯: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಸೂಕ್ತ ಕ್ರಮಕ್ಕೆ ಜನತೆ ಆಗ್ರಹಿಸಿದೆ. ಇಲ್ಲಿಯ ಮುತ್ತಪ್ಪ ದೇವಾಲಯದ ಬಳಿ ಅಳವಡಿಸಿರುವ ವಿದ್ಯುತ್ ಚಾಲಿತ ಮೋಟಾರ್ ಯಂತ್ರವು ದುರಸ್ತಿಯಾಗಿದ್ದು ವಾರಗಟ್ಟಲೆ ನೀರಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಮಣ್ಣಿನ ಅಡಿಯಲ್ಲಿ ಹಾಕಿರುವ ನೀರಿನ ಪೈಪುಗಳು ಬಿರುಕುಬಿಟ್ಟು ಪೈಪಿನೊಳಗೆ ಮಣ್ಣುಗಳು ತುಂಬಿ ಕೆಸರುಮಯವಾಗಿ ಟ್ಯಾಂಕಿನೊಳಗೆ ಸೇರಿ ಟ್ಯಾಂಕಿನ ತಳಭಾಗದಲ್ಲಿ ಸುಮಾರು ಒಂದೂವರೆ ಅಡಿಯಷ್ಟು ಕೆಸರು ತುಂಬಿರುವುದಾಗಿ ಸ್ಥಳೀಯ ನಿವಾಸಿ ಕೆ.ಎಲ್. ಹೊನ್ನಪ್ಪ ಆರೋಪಿಸಿದ್ದಾರೆ. ಕಲುಷಿತ ನೀರನ್ನು ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಬಿಸಿಯೂಟಕ್ಕೆ ಬಳಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ನಿಗದಿತ ಸಮಯ ಮತ್ತು ನಿಗದಿತ ದಿನಗಳಂದು ನೀರುಬಿಡುವ ವ್ಯವಸ್ಥೆಗಳಿರುವುದಿಲ್ಲ, ನೀರಿನ ಪೈಪಿನ ದುರಸ್ತಿ ಕಾರ್ಯ ಪದೇ ಪದೇ ನಡೆಯುತ್ತಿದ್ದು, ಇಲ್ಲಿ ಕೆಲಸದ ಗುಣಮಟ್ಟವನ್ನು ಸಾರ್ವಜನಿಕರು ಪ್ರಶ್ನಿಸುವಂತೆ ಆಗಿದೆ ಎಂದು ಹರಿದಾಸ್ ದೂರಿದರು.
ಮುಂದಿನ ದಿನಗಳಲ್ಲಿ ಈ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಬೇಕೆAದು ಗ್ರಾಮಸ್ಥರಾದ ಸಿ.ಆರ್. ಚಂದ್ರ, ಶ್ರೀನಿವಾಸ್, ಧರ್ಮಪ್ಪ (ಕಿಬ್ಬೆಟ್ಟ ), ಡಿ. ನಾರಾಯಣ, ಡೇವಿಡ್ ಆಗ್ರಹಿಸಿದ್ದಾರೆ.
- ಸುಕುಮಾರ ಎಂ.ಎ.