ಕುಶಾಲನಗರ, ನ. ೧೯: ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಶೇ. ೧೦ ರಷ್ಟು ಇಳಿಕೆ ಕಂಡು ಬಂದಿದೆ ಎಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞರಾದ ಡಾ. ಕೆ.ಎನ್. ಶಿವಕುಮಾರ್ ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಶಾಲನಗರ ತಾಲೂಕು ಆರೋಗ್ಯ ಇಲಾಖೆ ಹಾಗೂ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ನವಜಾತ ಶಿಶುಗಳ ಸಪ್ತಾಹ ೨೦೨೩ ಕಾರ್ಯಕ್ರಮದಲ್ಲಿ ಮಾತನಾಡಿದರು.

ನವಜಾತ ಶಿಶುಗಳ ಮರಣ ಶೇ.೪೦ ರಷ್ಟು ಪ್ರಮಾಣ ಹೆರಿಗೆಯ ಮೊದಲ ದಿನ ಸಂಭವಿಸುತ್ತದೆ. ಉಳಿದಂತೆ ಜನನವಾದ ಪ್ರಥಮ ವಾರದಲ್ಲಿ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.

೨೦೨೩ರ ಅಂತ್ಯದೊಳಗೆ ನವಜಾತ ಶಿಶುಗಳ ಮರಣ ಸಂಖ್ಯೆಯನ್ನು ಏಕ ಸಂಖ್ಯೆಗೆ ಇಳಿಸುವ ಗುರಿ ಆರೋಗ್ಯ ಇಲಾಖೆಯದ್ದಾಗಿದೆ ಎಂದರು. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಸ್ಥಿರೀಕರಣ ಘಟಕ ಚಾಲನೆಯಲ್ಲಿದ್ದು ಕಡಿಮೆ ತೂಕ ಮತ್ತು ಜಾಂಡಿಸ್ ರೋಗಭಾದಿತ ಶಿಶುಗಳ ಆರೈಕೆ ಮಾಡಲಾಗುತ್ತಿದೆ. ಇಂತಹ ಸೌಲಭ್ಯ ತೊಡಗಿಸಿಕೊಳ್ಳುವ ಮೂಲಕ ನವಜಾತ ಶಿಶುಗಳ ಪೋಷಣೆ ಮಾಡುವಂತೆ ಅವರು ಕರೆ ನೀಡಿದರು.

ಈ ಸಂದರ್ಭ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್, ರಾಷ್ಟಿçÃಯ ನವಜಾತ ಶಿಶು ಸಪ್ತಾಹ ಒಂದು ವಾರಗಳ ಕಾಲ ನಡೆಯಲಿದ್ದು ಈ ಸಂದರ್ಭ ತಾಯಂದಿರಿಗೆ ಹಾಲು ಉಣಿಸುವ ಬಗ್ಗೆ ಮಾಹಿತಿ, ಕಡಿಮೆ ತೂಕದ ಮಕ್ಕಳ ಆರೈಕೆ ಬಗ್ಗೆ ವಿವರ ನೀಡಲಾಗುವುದು. ಅಂಗನವಾಡಿಗಳಿಗೆ ಭೇಟಿ ನೀಡಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳ ಆರೈಕೆಯ ಬಗ್ಗೆ ಸಮಗ್ರ ತರಬೇತಿ ಒದಗಿಸಲಾಗುವುದು. ಈ ನಡುವೆ ಮನೆಮನೆಗೆ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ತಜ್ಞ ಡಾ.ಪ್ರತಿಭಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ, ಮಂಜುಳಾ ಮತ್ತಿತರರು ಇದ್ದರು.