ಮಡಿಕೇರಿ, ನ. ೧೯: ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಸಂಯುಕ್ತ ಹೋರಾಟ-ಕರ್ನಾಟಕ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ತಾ. ೨೬ ರಿಂದ ೨೮ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ೭೨ ಗಂಟೆಗಳ ಮಹಾಧರಣಿಯ ಪ್ರಚಾರ ಆಂದೋಲನಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್‌ನ ಕೊಡಗು ಜಿಲ್ಲಾ ಸಮಿತಿ ಸಿದ್ದಾಪುರದಲ್ಲಿ ಚಾಲನೆ ನೀಡಿತು.

ಬೆಲೆ ಏರಿಕೆ ನಿಯಂತ್ರಿಸಬೇಕು, ಅಗತ್ಯ ವಸ್ತುಗಳು, ಆಹಾರ, ಔಷಧಿ, ನೇಕಾರಿಕೆ, ಕೃಷಿ ಯಂತ್ರೋಪಕರಣಗಳ ಮೇಲಿನ ಜಿ.ಎಸ್.ಟಿ ರದ್ದುಪಡಿಸಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕು ಎಂದು ಪ್ರಮುಖರು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ದುಡಿಯುವ ಜನರ ಪ್ರಮುಖ ೨೪ ಬೇಡಿಕೆಗಳನ್ನು ಮುಂದಿಟ್ಟುಕೊAಡು ಬೆಂಗಳೂರಿನಲ್ಲಿ ೭೨ ಗಂಟೆಗಳ ಮಹಾಧರಣಿ ನಡೆಯಲಿದ್ದು, ಅದರ ಪ್ರಚಾರ ಆಂದೋಲನವನ್ನು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆಸಲಾಗುತ್ತಿದೆ ಎಂದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ಸಿದ್ದಾಪುರದಲ್ಲಿ ಪ್ರಾರಂಭಗೊAಡ ಪ್ರಚಾರ ಜಾಥಾವು ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಮಡಿಕೇರಿಯಲ್ಲಿ ಕೊನೆಗೊಳ್ಳಲಿದೆ ಎಂದರು. ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಡಿ. ಕುಟ್ಟಪ್ಪನ್, ಉಪಾಧ್ಯಕ್ಷರು ಗಳಾದ ಹೆಚ್.ಪಿ. ರಮೇಶ್, ಸಾಜಿ ರಮೇಶ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮತ್ತಿತರ ಸಾಮಾಜಿಕ ಸಂಘಟನೆಗಳ ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು.