ಕುಶಾಲನಗರ, ನ. ೨೧: ಕುಶಾಲನಗರ ಮುಳ್ಳುಸೋಗೆಯ ಯುವಕನೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬೈಲುಕೊಪ್ಪೆ ಪೊಲೀಸ್ ಠಾಣೆಯಲ್ಲಿ ಐದು ಮಂದಿ ಮೇಲೆ ಮೊಕದ್ದಮೆ ದಾಖಲಾಗಿದೆ.

ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ನಿವಾಸಿ ಅಬ್ದುಲ್ ಸಮ್ಮದ್ (೩೪) ಎಂಬಾತನ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಕುಶಾಲನಗರ ಸಮೀಪದ ನಂಜರಾಯಪಟ್ಟಣದ ಹರ್ಷಿದ್, ರಫೀಕ್, ಬಸವನಹಳ್ಳಿಯ ಅಪ್ಪಣ್ಣ, ಮುಳ್ಳುಸೋಗೆಯ ನಿಖಿಲ್ ಮತ್ತು ನಂಜರಾಯಪಟ್ಟಣದ ಮನ್ಸೂರ್ ಎಂಬುವರು ಸೇರಿ ಕೊಪ್ಪ ಗ್ರಾಮದ ನಟರಾಜು ಎಂಬುವವರ ಅಂಗಡಿ ಮುಂದೆ ಕಾರಿನಲ್ಲಿ ಬಂದು ಸಮ್ಮದ್ ಮೇಲೆ ಹಲ್ಲೆ ಮಾಡಿ ಕಬ್ಬಿಣದ ರಾಡ್‌ನಿಂದ ಹೊಡೆದು ತಲೆ, ಸೊಂಟ, ಕಾಲಿಗೆ ತೀವ್ರ ಗಾಯ ಮಾಡಿರುವುದಾಗಿ ಗಾಯಾಳುವಿನ ಸಹೋದರ ಷಂಶುದ್ದೀನ್ ದೂರಿನಲ್ಲಿ ತಿಳಿಸಿದ್ದಾರೆ.

ತೀವ್ರ ಗಾಯಗೊಂಡ ಅಬ್ದುಲ್ ಸಮ್ಮದ್‌ಗೆ ಮಡಿಕೇರಿಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಘಟನೆಗೆ ಸಂಬAಧಿಸಿದAತೆ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಐದು ಮಂದಿಯ ಮೇಲೆ ದೂರು ದಾಖಲಿಸಲಾಗಿದೆ ಎಂದು ಬೈಲುಕೊಪ್ಪೆ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.

ಬಂಧನಕ್ಕೆ ಆಗ್ರಹ

ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗಾಯಾಳುವಿನ ಕುಟುಂಬ ಸದಸ್ಯರು ಮತ್ತು ಕುಶಾಲನಗರ ಮುಸ್ಲಿಂ ಒಕ್ಕೂಟದ ಪ್ರಮುಖರು ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಪೊಲೀಸರು ಗಾಯಾಳು ಕಡೆಯಿಂದ ವರದಿ ಪಡೆದಿಲ್ಲ, ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕರೀಂ ಆರೋಪಿಸಿದ್ದು ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಬೈಲುಕೊಪ್ಪೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.