ಚೆಟ್ಟಳ್ಳಿ, ನ. ೨೧: ಕಾಫಿ ಸಂಶೋಧನಾ ಉಪಕೇಂದ್ರ ಚೆಟ್ಟಳ್ಳಿಯಲ್ಲಿ ನವಂಬರ್ ೧ರಿಂದ ೧೫ ರವರೆಗೆ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

ಕೇಂದ್ರದ ಕಾಫಿ ಮಂಡಳಿಯು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದಂತೆ ಸಂಸ್ಥೆಯ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಕೇಂದ್ರದಲ್ಲಿ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ನವಂಬರ್ ೧ ರಂದು ಕಾಫಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಸ್ವಚ್ಛತಾ ಪಕ್ವಾಡ ಪ್ರತಿಜ್ಞೆಯನ್ನು ತೆಗೆದುಕೊಳ್ಳುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನ.೨ ರಂದು ಕಾಫಿ ಉಪಸಂಶೋಧನಾ ಕೇಂದ್ರದ ಮುಖ್ಯ ಕಚೇರಿ ಹಾಗು ವಸತಿಗ್ರಹಗಳ ಸುತ್ತಮುತ್ತ ಇದ್ದಂತಹ ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಶುಚಿಗೊಳಿಸಲಾಯಿತು. ನ.೬ ಹಾಗೂ ೭ರಂದು ಕೇಂದ್ರದ ಮುಖ್ಯ ಕಚೇರಿಯಿಂದ ಕಂಡಕೆರೆಯವರೆಗೂ ಹಾಗೂ ಚೆಟ್ಟಳ್ಳಿಯವರೆಗೂ ಸ್ವಚ್ಛತಾ ಜಾಥಾವನ್ನು ಏರ್ಪಡಿಸಿ ರಸ್ತೆ ಬದಿಯ ಕಸವನ್ನು ಹೆಕ್ಕುವ ಮೂಲಕ ರಸ್ತೆ ಬದಿಯನ್ನು ಶುಚಿಗೊಳಿಸಲಾಯಿತು. ನ. ೮ ಮತ್ತು ೯ರಂದು ಮನೆಯಲ್ಲಿ ಉತ್ಪತ್ತಿಯಾಗುವಂತಹ ತ್ಯಾಜ್ಯವಸ್ತುಗಳನ್ನು ಬಳಸಿ ಗೊಬ್ಬರವನ್ನು ತಯಾರಿಸುವ ವಿಧಾನದ ಬಗ್ಗೆ ಸಂಸ್ಥೆಯ ವಿಜ್ಞಾನಿಗಳು ತೋಟದ ಕಾರ್ಮಿಕರಿಗೆ ಕೊಟ್ಟರು.

ನ. ೧೦ ರಂದು ಶಾಲಾ ಮಕ್ಕಳಿಗೆ ಸ್ವಚ್ಛ ಭಾರತ ಅಭಿಯಾನದ ಕುರಿತಾಗಿ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು ೨೭ ಸ್ಥಳೀಯ ಶಾಲಾ ಮಕ್ಕಳು ಭಾಗವಹಿಸಿದ್ದರು. ನ.೧೫ರಂದು ನಡೆದ ಸ್ವಚ್ಛತಾ ಪಕ್ವಾಡ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಕಾಫಿ ಉಪ ಸಂಶೋಧನಾ ಕೇಂದ್ರದ ಉಪನಿರ್ದೇಶಕ ಡಾ. ಕೆ. ಚಂದ್ರಪ್ಪ ಅವರು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಚೆಟ್ಟಳ್ಳಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ತಿಲಕ ಅವರು ಮಾತನಾಡಿ, ಸ್ವಚ್ಛ ಹಾಗೂ ಸುಂದರ ಪರಿಸರದಿಂದ ಆಗುವ ಉಪಯೋಗಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಸಂಸ್ಥೆಯ ವಿಜ್ಞಾನಿಗಳಾದ ಡಾ. ಮಂಜುನಾಥ್ ಅವರು ಮಾತನಾಡಿ, ಸ್ವಚ್ಛತೆ ಬಗ್ಗೆ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕೆ ಚಂದ್ರಪ್ಪ ಅವರು ಮಾತನಾಡಿ, ಪರಿಸರ ಸ್ವಚ್ಛಗೊಳಿಸುವುದು ಕೇವಲ ಕೆಲವು ದಿನಗಳಿಗೆ ಸೀಮಿತಗೊಳಿಸದೆ ನಿರಂತರವಾಗಿ ಮುಂದುವರೆಸಿಕೊAಡು ಹೋಗಬೇಕೆಂದು ಮನದಟ್ಟು ಮಾಡಿದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದಕ್ಕೆ ಸಂಸ್ಥೆಯ ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗದವರಿಗೆ ಬಟ್ಟೆ ಚೀಲಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರದ ಅಧಿಕಾರಿಗಳಾದ ಡಾ. ನದಾಫ್, ಡಾ.ನಾಗರಾಜ್, ಲತೇಶ್ವರಿ, ನಾಗೇಶ್, ವಿಪಿನ್, ಮಂಜು. ಕೆ, ಭಾರತಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಕಾರ್ಮಿಕ ವರ್ಗದವರು ಪಾಲ್ಗೊಂಡಿದ್ದರು.