ಕಣಿವೆ, ನ. ೨೧ : ಜಿಲ್ಲೆಯ ಎರಡನೇ ನೀರಾವರಿ ಯೋಜನೆ ಯಾದ ಚಿಕ್ಲಿಹೊಳೆ ಜಲಾಶಯ ಯೋಜನೆಯಿಂದ ಇಲ್ಲಿನ ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಈ ಜಲಾಶಯ ಅರಣ್ಯ ಇಲಾಖೆಯದ್ದೋ ? ನೀರಾವರಿ ಇಲಾಖೆಯದ್ದೋ ? ಅಥವಾ ರೈತರಿಗೆ ಸೇರಿದ್ದೋ ? ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಬೇಕು ಹಾಗೂ ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ನಾಲೆಗಳ ಎಡ ಹಾಗೂ ಬಲ ಬದಿಗಳಲ್ಲಿ ಬೆಳೆದಿರುವ ಕಾಡು ಗಿಡಗಳನ್ನು ತೆರವುಗೊಳಿಸುವ ಮೂಲಕ ಗ್ರಾಮಸ್ಥರು, ರೈತರು, ಗಿರಿಜನರು ನಿರ್ಭಯವಾಗಿ ಸಂಚರಿಸುವAತೆ ಮಾಡಬೇಕೆಂದು ಪಂಚಾಯಿತಿ ಸದಸ್ಯರೂ ಆಗಿರುವ ಸ್ಥಳೀಯ ಕೃಷಿಕ ಆರ್.ಕೆ. ಚಂದ್ರು ಹಾಗೂ ಗಿರಿಜನ ಮುಖಂಡ ಜೆ.ಟಿ. ಕಾಳಿಂಗ ನೀರಾವರಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಸೋಮವಾರ ಹೊಸಪಟ್ಟಣದ ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷ ಚೆಟ್ಟಡ್ಕ ವಿಶ್ವ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ನಂಜರಾಯಪಟ್ಟಣ ಪಂಚಾಯಿತಿಯ ಗ್ರಾಮಗಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ಕಾಡಂಚಿನ ಗ್ರಾಮಗಳ ಜನ ಸಂಚಾರದ ಮಾರ್ಗಗಳಲ್ಲಿ ಬೆಳೆದು ನಿಂತ ಕಾಡುಗಿಡಗಳನ್ನು ತೆರವುಗೊಳಿಸಬೇಕು.

ಚಿಕ್ಲಿಹೊಳೆ ಕಾಲುವೆಯ ನೀರು ರೈತರಿಗೆ ಸದ್ಭಳಕೆಯಾಗುವ ಯೋಜನೆ ರೂಪಿಸಬೇಕು. ಹಿಂದೆ ಜನರಿಂದ ಕಾಮಗಾರಿ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಯಂತ್ರಗಳನ್ನು ಬಳಸಿ ಹೂಳು ತೆಗೆವ ಪ್ರಹಸನ ಮಾಡುತ್ತಿದ್ದು ನಾಲೆಯ ಕಲ್ಲು ಕಟ್ಟಡಗಳು ಹಾನಿಯಾಗುತ್ತಿವೆ ಎಂದು ಕಾಳಿಂಗ ಇದೇ ಸಂದರ್ಭ ಹೇಳಿದರು.

ಕಾಡಾನೆ ಹಾವಳಿ : ಪಂಚಾಯಿತಿ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದ ತೋಟಗಾರಿಕೆ ಹಾಗೂ ಆಹಾರ ಉತ್ಪನ್ನಗಳು ಕಾಡಾನೆಗಳ ಪಾಲಾಗುತ್ತಿವೆ. ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಯುವ ಯಾವ ಯೋಜನೆಗಳನ್ನು ರೂಪಿಸುತ್ತಿಲ್ಲ. ರೈಲು ಕಂಬಿ ಬೇಲಿ ಅವೈಜ್ಞಾನಿಕವಾಗಿದೆ.

ಸೋಲಾರ್ ಬೇಲಿ ಪ್ರಯೋಜನ ವಾಗುತ್ತಿಲ್ಲ. ಅರಣ್ಯ ಇಲಾಖೆಯಿಂದ ರೈತರಿಗೆ ನ್ಯಾಯೋಚಿತವಾದ ಪರಿಹಾರದ ಹಣವೂ ಬರುತ್ತಿಲ್ಲ ಎಂದು ಹಲವು ರೈತರು ಅಳಲು ತೋಡಿಕೊಂಡರು.

ಕಸದ ತೊಟ್ಟಿಯಾದ ನದಿ ತೀರ : ನಂಜರಾಯಪಟ್ಟಣದ ದಾಸವಾಳ ದಿಂದ ಕಾವೇರಿ ನದಿ ದಂಡೆ ಯವರೆಗೂ ಪ್ರವಾಸಿಗರು ಎಸೆದಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಜನವಸತಿ ಪ್ರದೇಶ ಕಸದ ತೊಟ್ಟಿಯಾಗಿದೆ. ಕೂಡಲೇ ಸ್ವಚ್ಛತೆಗೆ ಒತ್ತು ನೀಡಬೇಕೆಂದು ಗ್ರಾಮದ ಸಚಿನ್ ಒತ್ತಾಯಿಸಿದರು.

ಸಭಾಧ್ಯಕ್ಷ ವಿಶ್ವ ಮಾತನಾಡಿ, ಪಂಚಾಯಿತಿಗೆ ಈ ಹಿಂದೆ ಕೇವಲ ೧೫ ಲಕ್ಷ ಅನುದಾನ ಬರುತ್ತಿತ್ತು. ಆದರೆ ಈ ಬಾರಿ ಸ್ವ ಪ್ರಯತ್ನದಿಂದಾಗಿ ಪಂಚಾಯಿತಿಗೆ ಒಂದು ಕೋಟಿ ಆದಾಯ ಬರುವಂತೆ ಮಾಡಿ ಕೊಂಡಿದ್ದೇವೆ. ಹಾಗಾಗಿ ಪಂಚಾಯಿತಿ ವ್ಯಾಪ್ತಿಯ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ಕಳೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೋಡಿಕೊಂಡ ಸಮಸ್ಯೆಗಳು ಹಾಗೂ ನೀಡಿದ ಸಲಹೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದ್ದೇವೆ.

ಕಾಡಾನೆಗಳ ಹಾವಳಿಗೆ ಸಂಬAಧಿಸಿದAತೆ ವಿಶೇಷ ಸಭೆ ನಡೆಸಿ ಅರಣ್ಯಾಧಿಕಾರಿಗಳ ಗಮನಕ್ಕೆ ಸಮಸ್ಯೆಗಳನ್ನು ತರಲಾಗಿದೆ. ಈ ಬಗ್ಗೆ ಪಂಚಾಯಿತಿಯಿAದ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಪತ್ರ ಬರೆದು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದೇವೆ.

ರೈಲ್ವೆ ಕಂಬಿ ಬೇಡ : ನಂಜರಾಯಪಟ್ಟಣ ವ್ಯಾಪ್ತಿಯ ಕಾಡಾನೆಗಳ ಹಾವಳಿ ಹೆಚ್ಚಿರುವ ಕಡೆ ನಿರ್ಮಿಸಿರುವ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಅಪೂರ್ಣ ಹಾಗೂ ಅವೈಜ್ಞಾನಿಕವಾಗಿದೆ. ಈ ಯೋಜನೆಯನ್ನು ವಿರೋಧಿಸಿ ಗ್ರಾಮಸಭೆಯಲ್ಲಿ ಖಂಡನಾ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಕುಶ ಸಾಕಾನೆ ಕಾಟ : ಹಾಗೆಯೇ ಸಾಕಾನೆ `ಕುಶ'ನ ಕಾಟದಿಂದ ರೈತರ ಕೃಷಿ ಫಸಲು ಹಾನಿಯಾಗುತ್ತಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಗಮನ ಹರಿಸಬೇಕೆಂದು ವಿಶ್ವ ಹೇಳಿದರು.

ನಂಜರಾಯಪಟ್ಟಣ ಹೋಬಳಿ ಮಾಡಿ : ಕೆಲವರು ನೆಲ್ಲಿಹುದಿಕೇರಿ ಗ್ರಾಮವನ್ನು ಹೋಬಳಿ ಮಾಡಬೇಕೆಂದು ಒಡಾಡುತ್ತಿದ್ದಾರೆ. ಆದರೆ ನಂಜರಾಯಪಟ್ಟಣವನ್ನು ಹೋಬಳಿ ಕೇಂದ್ರ ಮಾಡಿದಲ್ಲಿ ಸುತ್ತಲಿನ ಗ್ರಾಮಗಳ ಮಂದಿಗೆ ಹೆಚ್ಚು ಅನುಕೂಲವಾಗುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವ ನಿರ್ಣಯವನ್ನು ಸಭಾಧ್ಯಕ್ಷ ವಿಶ್ವ ಮಂಡಿಸಿದರು.

ಪ್ರವಾಸಿಗರು ಹೆಚ್ಚು ಆಗಮಿಸುವ ದುಬಾರೆ ಪ್ರವಾಸಿ ತಾಣದ ಬಳಿ ತೂಗು ಸೇತುವೆ ನಿರ್ಮಾಣ ಮಾಡುವ ಸಂಬAಧ ಅಲ್ಲಿನ ಪ್ರವಾಸಿಗರಿಗೆ ಹಾಗೂ ಗಿರಿಜನ ವಾಸಿಗಳಿಗೆ ಅನುಕೂಲ ಒದಗಿಸಲು ಸೂಕ್ತ ಅನುದಾನಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಿ ಒತ್ತಾಯಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧ್ಯಕ್ಷ ವಿಶ್ವ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಗೆ ಓರ್ವ ಪಶು ವೈದ್ಯರನ್ನು ನೇಮಕ ಮಾಡುವಂತೆಯೂ ನಾವು ಒತ್ತಾಯಿಸಿದ್ದೇವೆ ಎಂದು ವಿಶ್ವ ಹೇಳಿದರು.

ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಿದ್ದೇಗೌಡ ಕಾರ್ಯನಿರ್ವಹಿಸಿದರು.

ಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಸ್ವಾತಿ, ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ದಂಡಿನ ಡಿ. ಕಿರಣ್, ಅರಣ್ಯ ಇಲಾಖೆಯ ಮೀನು ಕೊಲ್ಲಿ ವಲಯದ ಉಪವಲಯಾಧಿಕಾರಿ ಕೂಡಕಂಡಿ ಸುಬ್ರಾಯ, ಪಂಚಾಯಿತಿ ಅಭಿಯಂತರ ಚಿದಾನಂದ, ತೋಟಗಾರಿಕೆ ಇಲಾಖೆಯ ಎಸ್.ಆನಂದ್, ಗ್ರಾಮ ಲೆಕ್ಕಿಗ ಸಚಿನ್, ಪಶುಪಾಲನಾ ಇಲಾಖೆಯ ಸುರೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮಾ, ಸದಸ್ಯರಾದ ಮಾವಾಜಿ ರಕ್ಷಿತ್, ಆರ್.ಕೆ.ಚಂದ್ರು, ಗಿರಿಜಮ್ಮ, ಜಾಜಿ ಇದ್ದರು. ಪಂಚಾಯಿತಿ ವತಿಯಿಂದ ಗ್ರಾಮಸಭೆಯಲ್ಲಿ ಮಹಿಳಾ ಲೇಖಕಿ ಸ್ಥಳೀಯ ಶಾಲಾ ಶಿಕ್ಷಕಿಯೂ ಆದ ಸುನೀತಾ ಹಾಗೂ ನಂಜರಾಯಪಟ್ಟಣ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರಸಾದ್ ಅವರನ್ನು ಗೌರವಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್ ಸ್ವಾಗತಿಸಿದರು.