ಮಡಿಕೇರಿ, ನ. ೨೧: ಸಂಘಟಿತ ರಾಗುವುದರಿಂದ ಅಗತ್ಯ ಸವಲತ್ತು ಗಳನ್ನು ಪಡೆಯುವುದು ಸುಲಭ ವಾಗುತ್ತದೆ. ಅಲ್ಲದೆ, ಬಹುಕಾಲದ ಬೇಡಿಕೆಗಳ ಈಡೇರಿಕೆ ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅಭಿಮತ ವ್ಯಕ್ತಪಡಿಸಿದರು.

ನಗರದ ಮೈತ್ರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಿಂದ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ಬಳಿಕ ಪೊಲೀಸರು ಸುಗಮ ಜೀವನ ನಡೆಸುವಂತಾಗಬೇಕು. ಸರಕಾರದ ಸವಲತ್ತು ಸುಲಭವಾಗಿ ದೊರೆಯಬೇಕಾದರೆ ಸಂಘಟನಾತ್ಮಕ ಚಟುವಟಿಕೆ ಮುಖ್ಯವಾಗುತ್ತದೆ. ಸಂಘ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದ ಅವರು, ಸಂಘದ ಚಟುವಟಿಕೆಗೆ ಪೂರಕ ಸಹಕಾರ ನೀಡುತ್ತೇನೆ. ಮೈತ್ರಿ ಭವನ ದುರಸ್ತಿ ಕಾರ್ಯಕ್ಕೆ ಶೀಘ್ರದಲ್ಲಿ ಮುಂದಾಗಲಾಗುವುದು. ಆರ್ಥಿಕ ಕ್ರೋಢಿಕರಣಕ್ಕೆ ಇದರಿಂದ ಸಹಕಾರಿ ಯಾಗಲಿದೆ. ಧ್ವಜ ದಿನಾಚರಣೆಯಡಿ ಸಂಗ್ರಹಿಸಿದ ಶುಲ್ಕ ಕಳೆದ ಬಾರಿಗಿಂತ ಶೇ. ೫೦ರಷ್ಟು ಹೆಚ್ಚಿದೆ. ಜಿಲ್ಲಾ ಪೊಲೀಸ್ ಇಲಾಖೆಗೂ ನಿವೃತ್ತ ಪೊಲೀಸರ ಮಾರ್ಗದರ್ಶನವಿದೆ. ಕಾಲಕಾಲಕ್ಕೆ ಸರಿಯಾದ ಸಲಹೆ ನೀಡುತ್ತ ವೃತ್ತಿಯಲ್ಲಿರುವ ಪೊಲೀಸರನ್ನು ಜಾಗೃತ ಗೊಳಿಸುತ್ತಿದ್ದಾರೆ. ನಿವೃತ್ತ ಪೊಲೀಸರಿಗೆ ವಿಮೆ ಯೋಜನೆ ಜಾರಿ ಸಂಬAಧ ಸರಕಾರದ ಗಮನ ಸೆಳೆಯಬೇಕು ಎಂದು ಸಲಹೆ ನೀಡಿದರು.

ಸಂಘದ ಗೌರವಾಧ್ಯಕ್ಷ ಎಂ.ಎ. ಅಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಿವೃತ್ತ ಪೊಲೀಸರ

(ಮೊದಲ ಪುಟದಿಂದ) ಹಿತಕ್ಕಾಗಿ ಸಂಘ ಸ್ಥಾಪನೆಯಾಯಿತು. ಇದೀಗ ನಿವೃತ್ತರು ಸಂಘಟಿತರಾಗಿದ್ದಾರೆ. ನಮ್ಮ ಹಕ್ಕಿಗಾಗಿ ಹೋರಾಡಿದ ಫಲ ಸವಲತ್ತುಗಳು ದೊರೆಯುತ್ತಿವೆ. ಪೊಲೀಸ್ ಇಲಾಖೆಯಲ್ಲಿರುವ ಎಲ್ಲಾ ಹಂತದ ಸಿಬ್ಬಂದಿಗಳಿಗೆ ಗೌರವ ದೊರಕಬೇಕೆಂಬುದು ನಮ್ಮ ಉದ್ದೇಶವಾಗಿದೆ. ಪೊಲೀಸ್ ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ವಲಯಗಳ ಪ್ರಮುಖರು ಸಂಘದ ಶ್ರೇಯೋಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಯೋಧ ಮೇಜರ್ ಪಾಲೆಕಂಡ ಅತುಲ್ ಅವರ ಪತ್ನಿ ಪಾಲೆಕಂಡ ಶೈಲಾ ಚಿಣ್ಣಪ್ಪ ಮಾತನಾಡಿ, ನಾನು ಪೊಲೀಸ್ ಕುಟುಂಬದಿAದ ಬಂದಿದ್ದು, ತನ್ನ ತಂದೆ ಪೊಲೀಸ್ ಎಸ್.ಪಿ.ಯಾಗಿ ಸೇವೆ ಮಾಡಿರುವ ಹಿನ್ನೆಲೆ ಪೊಲೀಸರ ಕಷ್ಟ, ಸವಾಲು ಅರಿವಿದೆ. ಸಂಕಷ್ಟದ ನಡುವೆಯೂ ಪೊಲೀಸರು ಜನಸೇವೆ ಮಾಡುತ್ತಿದ್ದಾರೆ. ಪೊಲೀಸರು ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಕುಟುಂಬ, ವೈಯಕ್ತಿಕ ಬದುಕನ್ನು ಮುಡಿಪಾಗಿಟ್ಟು ಸೇವೆ ಸಲ್ಲಿಸುವ ಪೊಲೀಸರಿಗೆ ನಿವೃತ್ತಿ ಬಳಿಕ ಸೂಕ್ತ ಗೌರವ, ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರಕುವಂತಾಗಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಎಂ.ಕೆ. ಉತ್ತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ ೯೦೦ ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಆದರೆ, ಭಾಗವಹಿಸುವಿಕೆ ಕಡಿಮೆ ಇದೆ. ಸಂಘ ಬೆಳ್ಳಿಹಬ್ಬ ಸಂಭ್ರಮಕ್ಕೆ ಕಾಲಿಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು.

ಸಂಘದ ಹಿರಿಯ ಸದಸ್ಯರು ಗಳಾದ ಕುಪ್ಪಂಡ ಕುಶಾಲಪ್ಪ, ಟಿ.ಎಂ. ಮಂದಣ್ಣ, ಕೆ.ಕೆ. ರಾಜು, ಹೆಚ್.ಕೆ. ತಿಮ್ಮಯ್ಯ, ಕೆ.ಕೆ. ಮಂದಪ್ಪ, ಪಾರ್ವತಿ, ಬಿ.ಕೆ. ಶಾಂಭಾ, ಮಾದಯ್ಯ ಅವರುಗಳನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಅಗಲಿದ ಸದಸ್ಯರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಎಡಿಜಿಪಿ ದಿ. ಸುಬ್ಬಯ್ಯ ಅವರ ಪತ್ನಿ ಸುಮತಿ ಸುಬ್ಬಯ್ಯ, ಸಂಘದ ಕಾರ್ಯದರ್ಶಿ ಎಂ. ಅಚ್ಚುತ್ತನ್ ನಾಯರ್, ಖಜಾಂಜಿ ಭೀಮಯ್ಯ, ಉಪಾಧ್ಯಕ್ಷ ಬಿ.ಆರ್. ಲಿಂಗಪ್ಪ, ನಿರ್ದೇಶಕರುಗಳಾದ ಎಂ.ಕೆ. ಕಾವೇರಪ್ಪ, ಎ.ಸಿ. ಚರ್ಮಣ, ಭೀಮಯ್ಯ, ರಾಮದಾಸ್, ಪರಶಿವ, ಕೆ.ಎಂ. ಸುಬ್ರಮಣಿ, ಸಿ.ಟಿ. ಚೀಯಣ್ಣ, ಐ.ಸಿ. ಗಣಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹರಿಶ್ಚಂದ್ರ ಪ್ರಾರ್ಥಿಸಿ, ಎಂ.ಕೆ. ಉತ್ತಪ್ಪ ಸ್ವಾಗತಿಸಿ, ಬಿ.ಆರ್. ಲಿಂಗಪ್ಪ ನಿರೂಪಿಸಿ, ವಂದಿಸಿದರು.