*ಗೋಣಿಕೊಪ್ಪಲು, ನ. ೨೧ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುವ ೨೦೨೩-೨೪ನೇ ಸಾಲಿನ ಪ್ರತಿಷ್ಠಿತ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ತಿತಿಮತಿ ಬಳಿಯ ಚೇಣಿಹಡ್ಲು ಹಾಡಿಯ ವೈ.ಡಿ. ಅರ್ಜುನ್ ಸಾಗರ್ ಆಯ್ಕೆಯಾಗಿದ್ದಾನೆ. ಆ ಮೂಲಕ ಅರ್ಜುನ್ ಸಾಗರ್ ಪ್ರತಿಷ್ಠಿತ ಈ ಗೌರವಕ್ಕೆ ಭಾಜನವಾದ ಮೊದಲ ಬುಡಕಟ್ಟು ಜನಾಂಗದ ಬಾಲಕನಾಗಿದ್ದಾನೆ.

ಮೇಯಲು ಬಂದು ಆಕಸ್ಮಿಕವಾಗಿ ಕೆಸರಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಹಸುವನ್ನು ಸಮೀಪದಲ್ಲಿ ಆಟವಾಡಿಕೊಂಡಿದ್ದ ೧೨ ವರ್ಷದ ಬಾಲಕನಾಗಿರುವ ಅರ್ಜುನ್ ಸಾಗರ್ ತನ್ನ ಸ್ನೇಹಿತರೊಂದಿಗೆ ಸೇರಿ ರಕ್ಷಣೆ ಮಾಡಿದ್ದ. ಮೇವನ್ನು ಅರಸಿಕೊಂಡು ಬಂದ ಹಸು ಆಕಸ್ಮಿಕವಾಗಿ ಕೆಸರಿನಲ್ಲಿ ಸಿಲುಕಿಕೊಂಡು ಅದರಿಂದ ಪಾರಾಗಲು ಪ್ರಯತ್ನಿಸುತ್ತಿದ್ದ ದೃಶ್ಯವನ್ನು ಕಂಡ ಅರ್ಜುನ್ ಸಾಗರ್ ಹೇಗಾದರೂ ಮಾಡಿ ಹಸುವಿನ ಪ್ರಾಣ ರಕ್ಷಿಸಬೇಕೆಂಬ ಛಲದಿಂದ ಸ್ನೇಹಿತರೊಂದಿಗೆ ಸುಮಾರು ೫ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಈ ಹಸುವಿನ ಪ್ರಾಣ ರಕ್ಷಣೆ ಮಾಡಿದ್ದ. ಈ ಕುರಿತ ವರದಿಯನ್ನು ಕಳೆದ ಏಪ್ರಿಲ್ ತಿಂಗಳ ೨೫ರಂದು `ಶಕ್ತಿ' ಪತ್ರಿಕೆ ಪ್ರಕಟಿಸಿತ್ತು.

ಅರ್ಜುನ್ ಸಾಗರ್‌ನ ಈ ಸಾಧನೆಯನ್ನು ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಸಕ್ತ ಸಾಲಿನ ಈ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.