ಕೇಂದ್ರ ಸರ್ಕಾರ ವಿರುದ್ಧ ಕೇರಳ ಸರಕಾರ ಪ್ರತಿಭಟನೆ
ನವದೆಹಲಿ, ಫೆ. ೮: ಕೇಂದ್ರ ಸರ್ಕಾರದಿಂದ ಆಗುತ್ತಿರುವ ತೆರಿಗೆ ಅನ್ಯಾಯದ ವಿರುದ್ಧ ಕೇರಳದ ಆಡಳಿತರೂಢ ಎಲ್ಡಿಎಫ್ ಸರ್ಕಾರ ಗುರುವಾರ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿತು. ‘ಒಕ್ಕೂಟ ವ್ಯವಸ್ಥೆ ರಕ್ಷಿಸಲು ಹೋರಾಟ' ಎಂಬ ಹೆಸರಿನಡಿ ಪ್ರತಿಭಟನೆ ಆರಂಭಿಸಿರುವ ಪಕ್ಷದ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಪಕ್ಷದ ಶಾಸಕರು, ಸಚಿವರು ಕೇಂದ್ರ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕೇಂದ್ರದ ಸರ್ಕಾರದ ತಾರತಮ್ಯ ನೀತಿ ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದಲ್ಲ. ಪ್ರತಿಭಟನೆ ಮಾಡಬೇಕೆಂದು ಈ ಮೊದಲೇ ನಾವು ನಿರ್ಧರಿಸಿದ್ದೇವು. ಅನುದಾನ ತಾರತಮ್ಯದ ಬಗ್ಗೆ ನಿರಂತರವಾಗಿ ಧ್ವನಿ ಎತ್ತಿದ್ದೇವೆ' ಎಂದು ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ ತಿಳಿಸಿದರು.
ರಾಜ್ಯ ಸರಕಾರದಿಂದ ಶೇ. ೪೦ ಕಮೀಷನ್ ಆರೋಪ
ಬೆಂಗಳೂರು, ಫೆ. ೮: ಶೇ. ೪೦ ರಷ್ಟು ಕಮೀಷನ್ ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರಿದಿದೆ. ಬಿಜೆಪಿ ಸರ್ಕಾರದಲ್ಲಿ ಶಾಸಕರೇ ನೇರವಾಗಿ ಕಮೀಷನ್ ಪಡೆಯುತ್ತಿದ್ದರು. ಈಗ ಅಧಿಕಾರಿಗಳ ಮೂಲಕ ಕಮಿಷನ್ ಸಂಗ್ರಹವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಬಹುತೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಚಿವರು, ಶಾಸಕರಿಗೆ ನೀಡಬೇಕು ಎಂದು ಗುತ್ತಿಗೆದಾರರಿಂದ ಕಮೀಷನ್ ವಸೂಲಿ ಮಾಡುತ್ತಿದ್ದಾರೆ ಎಂದು ಕೆಂಪಣ್ಣ ದೂರಿದರು.
ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮ
ಬೆಂಗಳೂರು, ಫೆ. ೮: ಸಣ್ಣ ಸಣ್ಣ ಸಮಸ್ಯೆಗಳನ್ನು ಬಹುದೂರದಿಂದ ಹೊತ್ತು ತಂದಿದ್ದ ಜನರ ಅಹವಾಲುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರವಾಗಿ ಆಲಿಸಿದರು. ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಆರಂಭವಾದರೂ ಜನರು ಸಮಾಧಾನದಿಂದ ಸರದಿಯಲ್ಲಿ ನಿಂತು ಅರ್ಜಿ ನೀಡಿದರು. ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ಸಾಮಾಜಿಕ ಸಮಾನತೆ ನಿರ್ಮಾಣದ ಹಾದಿಯಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದಾಗಿವೆ. ಜನರ ಸಮಸ್ಯೆಗಳ ನಿವಾರಣೆಗೆ ವೇಗ ನೀಡಲು ಜನಸ್ಪಂದನ ಕಾರ್ಯಕ್ರಮ ದಾರಿಯಾಗಿದೆ. ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಲಿದೆ. ವಿರೋಧ ಪಕ್ಷಗಳಿಗೆ ಅಭಿವೃದ್ದಿಯ ಅರ್ಥವೇ ಗೊತ್ತಿಲ್ಲ. ಗ್ಯಾರಂಟಿ ಯೋಜನೆಗಳೂ ಅಭಿವೃದ್ಧಿಯ ಭಾಗ. ಜನರ ಆರ್ಥಿಕ ಸಮಸ್ಯೆಗಳಿಗೆ ನೇರ ಪರಿಹಾರ ಒದಗಿಸುವಲ್ಲಿ ಗ್ಯಾರಂಟಿಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಕಾಂಗ್ರೆಸ್ ಕಪ್ಪುಪತ್ರ ‘ದೃಷ್ಟಿ ಬೊಟ್ಟು’-ಮೋದಿ ವ್ಯಂಗ್ಯ
ನವದೆಹಲಿ, ಫೆ. ೮: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತಂತೆ ಕಾಂಗ್ರೆಸ್ ಬಿಡುಗಡೆಗೊಳಿಸಿದ ಕಪ್ಪು ಪತ್ರವನ್ನು 'ದೃಷ್ಟಿ ಬೊಟ್ಟು’ ಎಂದು ಛೇಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದು ನಮ್ಮ ಸರ್ಕಾರದ ಸಾಧನೆಗಳ ಮೇಲೆ ನೆಟ್ಟಿರುವ ಕೆಟ್ಟ ದೃಷ್ಟಿಯನ್ನು ನಿವಾರಿಸುತ್ತದೆ ಎಂದು ಹೇಳಿದ್ದಾರೆ. ಯಾವುದೇ ಒಳ್ಳೆಯ ಕೆಲಸವಾದರೂ ನಾವು ಕಪ್ಪು ಬೊಟ್ಟನ್ನಿಟ್ಟು ದೃಷ್ಟಿ ತೆಗೆಯುತ್ತೇವೆ. ಇಂದು ಈ ಗೌರವ ಸಮರ್ಪಿಸಿದ ಮಲ್ಲಿಕಾರ್ಜುನ ಖರ್ಗೆಜೀ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ ಇಂದು ಕಪ್ಪು ಪತ್ರವನ್ನು ಬಿಡುಗಡೆ ಮಾಡಿತ್ತು. ಮೋದಿ ಆಡಳಿತದ ಕಳೆದ ೧೦ ವರ್ಷಗಳು ಬೆಲೆ ಏರಿಕೆ, ನಿರುದ್ಯೋಗ, ಪ್ರಮುಖ ಸಂಸ್ಥೆಗಳ ಬುಡಮೇಲು ಮತ್ತು ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ತಾರತಮ್ಯ ಸೇರಿ ಅನ್ಯಾಯದ ವರ್ಷಗಳಾಗಿದ್ದವು ಎಂದು ಕಾಂಗ್ರೆಸ್ ದೂಷಿಸಿತ್ತು.
ಮನಮೋಹನ್ ಸಿಂಗ್ ಕೊಡುಗೆ ಶ್ಲಾಘಿಸಿದ ಮೋದಿ
ನವದೆಹಲಿ, ಫೆ. ೮: ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರಿಗೆ ವಿದಾಯ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸದನಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯಲ್ಲಿ ರಾಜ್ಯಸಭೆಯಲ್ಲಿ ಮತ ಚಲಾಯಿಸಲು ಬಂದರು. ಒಬ್ಬ ಸದಸ್ಯನು ತನ್ನ ಕರ್ತವ್ಯಗಳ ಬಗ್ಗೆ ಜವಾಬ್ದಾರಿಯಾಗಿದ್ದಾನೆ ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ. ನಿವೃತ್ತರಾಗುತ್ತಿರುವ ಎಲ್ಲ ಸದಸ್ಯರಿಗೆ ಶುಭ ಹಾರೈಸಿದ ಅವರು, ತಮ್ಮ ಅನುಭವದಿಂದ ಹೊಸ ತಲೆಮಾರುಗಳು ಪ್ರಯೋಜನ ಪಡೆಯಲಿ ಎಂದು ಹಾರೈಸಿದರು.
ಪಾಕ್ನಲ್ಲಿ ಸಾರ್ವತ್ರಿಕ ಚುನಾವಣೆ
ಇಸ್ಲಾಮಾಬಾದ್, ಫೆ. ೮: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ದೇಶದಾದ್ಯಂತ ತಾತ್ಕಾಲಿಕವಾಗಿ ಮೊಬೈಲ್ ಸೇವೆಯನ್ನು ನಿರ್ಬಂಧಿಸಲಾಗಿತ್ತು. ದೇಶದಾದ್ಯಂತ ಮೊಬೈಲ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇತ್ತೀಚಿಗೆ ನಡೆದ ದಾಳಿ ಹಿನ್ನೆಲೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಭದ್ರತಾ ಕ್ರಮಗಳು ಅತ್ಯಗತ್ಯ ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಬೆಳಿಗ್ಗೆ ೮ ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ ೫ ಗಂಟೆಗೆ ಮುಕ್ತಾಯಗೊಂಡಿದೆ. ಚುನಾವಣೆ ಇರುವ ಕಾರಣ ದೇಶದಾದ್ಯಂತ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಪಾಕಿಸ್ತಾನ ಚುನಾವಣಾ ಆಯೋಗದ ಪ್ರಕಾರ, ೪,೮೦೭ ಪುರುಷರು, ೩೧೨ ಮಹಿಳೆಯರು ಮತ್ತು ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿ ೫,೧೨೧ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.