ಮಡಿಕೇರಿ, ಫೆ. ೮: ಕೊಡಗು ಜಿಲ್ಲೆಯಲ್ಲಿ ಇರುವದು ಒಂದೇ ಒಂದು ಜಲಾಶಯ., ಅದು ಹಾರಂಗಿ ಎಂಬ ಹೆಸರಿನಲ್ಲಿದೆ. ಈ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳು ಹಾಗೂ ಬಹುತೇಕ ಮೈಸೂರು ಜಿಲ್ಲೆಯ ಕೃಷಿ ಪ್ರದೇಶಗಳಿಗೆ ಹರಿಸಲಾಗುತ್ತದೆ. ಇದರಿಂದಾಗಿ ಬಹುತೇಕ ರೈತರ ಬಾಳು ಹಸನಾಗುತ್ತಿದೆ. ಇದರೊಂದಿಗೆ ಮಳೆಗಾಲದಲ್ಲಿ ಈ ಜಲಾಶಯ ಭರ್ತಿಯಾದಾಗ ನಾಲ್ಕು ಕ್ರೆಸ್ಟ್ ಗೇಟ್‌ಗಳಿಂದ ಹೊರಬಿಡಲಾಗುವ ನೀರು ಧುಮ್ಮಿಕ್ಕುವ ಸೌಂದರ್ಯವನ್ನು ನೋಡಲು ಕಣ್ಣುಗಳೇ ಸಾಲದು., ಜಿಲ್ಲೆ, ರಾಜ್ಯ, ಅಂತರರಾಜ್ಯ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿ ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.., ಜೊತೆ ಜೊತೆಗೆ ಜಲಾಶಯದ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ವಿಹರಿಸಿ ಸಂಭ್ರಮಿಸುತ್ತಾರೆ.,

ಆದರೆ.., ಈ ಸಂಭ್ರಮದ ಹಿಂದೆ ಇರುವ ಕಣ್ಣೀರ ಕತೆ ಮಾತ್ರ ಯಾರಿಗೂ ತಿಳಿದಿಲ್ಲ., ಜಲಾಶಯಕ್ಕಾಗಿ ತಮ್ಮ ಸ್ವಂತ ಜಮೀನು ಕಳೆದುಕೊಂಡು ಪರಿಹಾರ ಹಾಗೂ ಪುನರ್‌ವಸತಿಗಾಗಿ ಇಂದಿಗೂ ಪರಿತಪಿಸುತ್ತಿರುವ ಮಂದಿಯ ಅಳಲು ಆಡಳಿತ ನಡೆಸುವವರಿಗೆ, ಸರಕಾರಕ್ಕೆ ಕೇಳಿಸುತ್ತಿಲ್ಲ., ನ್ಯಾಯಕ್ಕಾಗಿ ಹೋರಾಟ ಮಾಡುತ್ತ ಅರ್ಧ ಜೀವನ ಸವೆಸಿದರೂ ಕಗ್ಗಲ್ಲಿನಂತಿರುವ ಅಧಿಕಾರಿ ವರ್ಗದ ಹೃದಯಕ್ಕೆ ಇವರ ವೇದನೆಯ ಕೂಗು ನಾಟುತ್ತಿಲ್ಲ..! ಹಿನ್ನೀರು ಪ್ರದೇಶದಲ್ಲಿದ್ದ ಮುಳುಗಡೆಯಾದ ಸಂತ್ರಸ್ತರಿಗೆ ಜಾಗ, ಪರಿಹಾರ, ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. ಅದೇ ಜಲಾಶಯದ ಮುಂಭಾಗದಲ್ಲಿನ ಜಾಗ ಕಳೆದುಕೊಂಡವರಿಗೆ ಇದೂವರೆಗೆ ಚಿಕ್ಕಾಸು ಕೂಡ ನೀಡಿಲ್ಲ., ೪೫ ವರ್ಷಗಳು ಸರಿದು ಹೋದರೂ ಇವರ ಕೂಗು ಸಂಬAಧಿಸಿದವರ ಕರ್ಣ ಕುಂಡಲವನ್ನು ತಲುಪಿಲ್ಲ.., ಇವರದೇ ಜಾಗದಲ್ಲಿ ಯಾರೋ ಮನೆ ಕಟ್ಟಿಕೊಂಡಿದ್ದರೂ ಅಧಿಕಾರಿಗಳ ಗಮನ ಅತ್ತ ಹರಿದಿಲ್ಲ..! ಇಲ್ಲಿ ಕಣ್ಣೀರಿನ ಕೋಡಿಯೂ ಹರಿಯುತ್ತಿದೆ..!

ಹಾರಂಗಿ ಎಂಬ ಜಲಾಶಯ ನಿರ್ಮಾಣ ಆಗುವ ಮೊದಲು ಆ ಜಾಗದಲ್ಲಿ ನೂರಾರು ಮಂದಿ ನೆಲೆಸಿದ್ದರು. ಜಲಾಶಯಕ್ಕಾಗಿ ಜಾಗ ಗುರುತು ಮಾಡುವ ಸಂದರ್ಭ ಅಲ್ಲಿದ್ದವರ ಮನವೊಲಿಸಿ, ಪರ್ಯಾಯ ಜಾಗ, ಮನೆ ನಿರ್ಮಿಸಿಕೊಡುವ ಭರವಸೆಯನ್ನು ಅಂದಿನ ಸರಕಾರ ನೀಡಿತ್ತು. ನಂತರದಲ್ಲಿ ತನ್ನ ವಾಗ್ದಾನವನ್ನು ಸರಕಾರ ಮರೆತದ್ದರಿಂದ ಯೋಜನಾ ನಿರಾಶ್ರಿತರು ಪ್ರತಿಭಟನೆಯ ಹಾದಿ ಹಿಡಿದದ್ದರಿಂದ ಕೊನೆಗೂ ಹೇರೂರು, ಕಾಜೂರು, ಯಡವನಾಡು ಮುಂತಾದೆಡೆ ತಲಾ ನಾಲ್ಕು ಎಕರೆಯಂತೆ ಜಾಗ ನೀಡಲಾಗಿದೆ. ಅದೂ ಕೂಡ ಜಲಾಶಯದ ಹಿಂಭಾಗದ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ. ಜಲಾಶಯದ ಮುಂಭಾಗದ ಪ್ರದೇಶದಲ್ಲಿ ವಾಸವಿದ್ದ ಜನರನ್ನು ಮರೆತೇ ಹೋಗಿದ್ದಾರೆ. ಅಲ್ಲಿಂದ ತೆರವುಗೊಂಡ ಜನರು ಸನಿಹದಲ್ಲೇ ಇರುವ ಮಾವಿನ ಹಳ್ಳ, ಕಾಜೂರು, ಯಡವಾರೆ ಸೇರಿದಂತೆ ಇತರ ಪ್ರದೇಶಗಳಲ್ಲಿನ ಪೈಸಾರಿ ಜಾಗದಲ್ಲಿ ಮನೆ ಮಾಡಿಕೊಂಡು ಇಂದು ಸಿಗಬಹುದು, ನಾಳೆ ಸಿಗಬಹುದು ಎಂದು ಪರಿಹಾರ ಹಾಗೂ ಪುನರ್‌ವಸತಿಗಾಗಿ ವಿಧಾನಸೌಧದತ್ತ ದೂರ ದೃಷ್ಟಿ ಹಾಯಿಸುತ್ತಲೇ ಇದ್ದಾರೆ. ಸಂಬAಧಿಸಿದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಲೇ ಜಾಗದ ಒಡೆಯರಾಗಿದ್ದ ಹಿರಿಯರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದೀಗ ಅವರ ವಾರಸುದಾರರು ಹೋರಾಟ ಮುಂದುವರಿಸಿದ್ದು, ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ಸವಲತ್ತು ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಂಬAಧಿತ ಅಧಿಕಾರಿಗಳು ಮಾತ್ರ ಕಂಬಳಿ ಹೊದ್ದು ಮಲಗಿದ್ದಾರೆ..!

೧೯೬೯ಲ್ಲಿ ಜಾಗ ಸ್ವಾಧೀನ..!

ಪ್ರಸ್ತುತ ಇರುವ ಹಾರಂಗಿ ಜಲಾಶಯ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲುಗುಂದ ಗ್ರಾಮಕ್ಕೆ ಸೇರಿದ್ದಾಗಿದೆ. ಈ ಗ್ರಾಮದಲ್ಲಿ ಸ್ವಾತಂತ್ರö್ಯ ಪೂರ್ವದಿಂದಲೂ ಜನರು ವಾಸಿಸುತ್ತಿದ್ದರು. ವಾಸವಿದ್ದವರಿಗೆ ೧೯೫೬ರ ಆಸುಪಾಸಿನಲ್ಲಿ ಜಾಗದ ಹಕ್ಕುಪತ್ರ ಕೂಡ ನೀಡಲಾಗಿದೆ.

ನಂತರದಲ್ಲಿ ಅಲ್ಲಿ ಜಲಾಶಯ ನಿರ್ಮಾಣ ಮಾಡಬೇಕೆಂಬ ಪ್ರಸ್ತಾಪ ಬಂದಾಗ ಅಲ್ಲಿ ಜನರನ್ನು ಒಕ್ಕಲೆಬ್ಬಿಸುವ ನಿರ್ಧಾರ ತಳೆಯಲಾಯಿತು. ಸ್ಥಳಾಂತರಗೊAಡ ಯೋಜನಾ ನಿರಾಶ್ರಿತರಿಗೆ ಬದಲಿ ಜಾಗ, ಪುನರ್‌ವಸತಿ ಕಲ್ಪಿಸುವ ಕರಾರು ಕೂಡ ಮಾಡಲಾಯಿತು. ಅದರಂತೆ ೧೯-೭-೧೯೬೯ರಲ್ಲಿ ಜಾಗದ ಸ್ವಾಧೀನ ಪಡಿಸಿಕೊಳ್ಳಲು ಸರಕಾರ ಆದೇಶ ಹೊರಡಿಸಿ, ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಅಲ್ಲಿದ್ದವರು ತಮ್ಮ ಮನೆ ಮಠ ತೊರೆದು ಎಲ್ಲೆಂದರಲ್ಲಿಗೆ ವಲಸೆ ಹೋದರು. ಆದರೆ ಇದುವರೆಗೂ ಪುನರ್‌ವಸತಿ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ..!

ನ್ಯಾಯಕ್ಕಾಗಿ ಹೋರಾಟ..!

ಮಾವಿನ ಹಳ್ಳ, ಯಡವಾರೆ ಇನ್ನಿತರ ಕಡೆಗಳಿಗೆ ವಲಸೆ ಹೋದ ಯೋಜನಾ ನಿರಾಶ್ರಿತರು ಪುನರ್‌ವಸತಿಗಾಗಿ ಕಾವೇರಿ ನೀರಾವರಿ ನಿಗಮ, ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜನಪ್ರತಿನಿಧಿಗಳ ಬಳಿ ಅಲೆದಾಡಿದ್ದಾರೆ. ಆದರೆ ಯಾವದೇ ಪ್ರಯೋಜನವಾಗಿಲ್ಲ. ಹಿರಿಯರನೇಕರು ಸಾವನ್ನಪ್ಪಿದ್ದಾರೆ. ಇದೀಗ ಅವರ ಮಕ್ಕಳು ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿದ್ದಾರೆ. ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಸಲ್ಲಿಸಿದ ಸಂದರ್ಭ ಸಂಬAಧಿಸಿದ ಅಧಿಕಾರಿಗಳು ಪುನರ್‌ವಸತಿ ಕಲ್ಪಿಸಲಾಗಿದೆ, ಈ ಸಂಬAಧ ಯಾವದೇ ಬಾಕಿ ಇರುವ ದಾಖಲೆಗಳಿಲ್ಲ ಎಂದು ತಿರಸ್ಕರಿಸಿದ್ದಾರೆ. ನಂತರದಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದಾಗ ಅಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ ಮೇರೆಗೆ ಉಪ ವಿಭಾಗಾಧಿ ಕಾರಿಗಳು ಪರಿಶೀಲನೆ ಮಾಡಿ ಯಾವದೇ ಪರಿಹಾರ ನೀಡಿರುವದಿಲ್ಲ. ಜಲಾಶಯದ ಮುಂಭಾಗ ದಲ್ಲಿರುವ ಜಾಗದಲ್ಲಿ ಹಲವು ಅನಧಿಕೃತ ಮನೆಗಳು ನಿರ್ಮಾಣ ವಾಗಿವೆ ಎಂದು ವರದಿ ಸಲ್ಲಿಸಿದ್ದಾರೆ.

(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಭೂ ಸ್ವಾಧೀನ ಅಧಿಕಾರಿ, ಹಾರಂಗಿ ನಾಲಾ ವಿಭಾಗ ಕಾರ್ಯಪಾಲಕ ಅಭಿಯಂತರರಿಗೆ ನೋಟೀಸ್ ಜಾರಿ ಮಾಡಿ ಆರು ತಿಂಗಳೊಳಗಡೆ ನಿಯಮಾನುಸಾರ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ೧-೭-೨೦೧೯ರಲ್ಲಿ ಆದೇಶ ನೀಡಿದ್ದಾರೆ. ಭೂ ಸ್ವಾಧೀನ ಅಧಿಕಾರಿ ಹಾಗೂ ಹಾರಂಗಿ ಜಲಾಶಯದ ಅಧಿಕಾರಿಗಳು ಭೂ ಸ್ವಾಧೀನದ ಬಗ್ಗೆ ಯಾವದೇ ಕಡತಗಳು ಲಭ್ಯವಿಲ್ಲ, ಜಲಾಶಯದ ಮುಂಭಾಗದ ಪ್ರದೇಶದಲ್ಲಿ ಹಾರಂಗಿ ಜಲಾಶಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮನೆ ಕಟ್ಟಿಕೊಂಡಿರುವದಾಗಿ ವರದಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂತ್ರಸ್ತರು ಸರಕಾರದ ಪ್ರಧಾನ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಪರಿಣಾಮ ಕಾರ್ಯದರ್ಶಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮತ್ತೆ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

೩೫೮ ಎಕರೆ ಜಾಗ..!

ಹಾರಂಗಿ ಜಲಾಶಯದ ಎದುರು ಒಂದಲ್ಲ, ಎರಡಲ್ಲ ಬರೋಬ್ಬರಿ ೩೫೮ ಎಕರೆ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಸುಮಾರು ೫೦ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದವು. ಎಲ್ಲರ ಜಾಗ ಸರಕಾರದ ವಶವಾಗಿದೆ. ಬದಲಿಗೆ ಯಾವದೇ ಪರಿಹಾರವೂ ಸಿಕ್ಕಿಲ್ಲ. ಇದರಿಂದ ನೊಂದ ಮಾವಿನ ಹಳ್ಳದಲ್ಲಿ ನೆಲೆಸಿರುವ ೮ ಮಂದಿ ಎಲ್ಲರ ಪರವಾಗಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇನ್ನುಳಿದವರು ಎಲ್ಲಿದ್ದಾರೆಂಬ ಮಾಹಿತಿ ಕೂಡ ಇಲ್ಲದಾಗಿದೆ. ಆದರೆ ಎಲ್ಲರೂ ಯೋಜನಾ ನಿರಾಶ್ರಿತರಾಗಿದ್ದಾರೆ. ಜಾನಕ್ಕಮ್ಮ, ಕೆ.ಕೆ. ರಾಮಕೃಷ್ಣ, ಕೆ.ಬಿ.ಅಪ್ಪಯ್ಯ, ಕಾವೇರಮ್ಮ, ಹೆಚ್.ಎಸ್. ಸತೀಶ್, ಕೆ.ಎಸ್.ಪ್ರಕಾಶ್, ಕೆ.ಜಿ.ದೇವರಾಜ್, ಕೆ.ಜಿ.ಬಾಬಣ್ಣ ಇವರುಗಳು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಯೋಜನಾ ನಿರಾಶ್ರಿತರಾಗಿದ್ದಾರೆ.

ಹಾರಂಗಿಯಲ್ಲಿ ಪ್ರತಿಭಟನೆ..!

ಈ ನಿರಾಶ್ರಿತರ ಹೋರಾಟಕ್ಕೆ ಕ್ಷೇತ್ರದ ಶಾಸಕರಾಗಿರುವ ಡಾ. ಮಂಥರ್‌ಗೌಡ ಸಹಕಾರ ನೀಡುತ್ತಿದ್ದಾರೆ. ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆದು ಪರಿಹಾರಕ್ಕೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯ್ತಿ ಸದಸ್ಯರಾಗಿರುವ ಹೆಚ್.ಎಸ್. ರವಿ ಕೂಡ ಎಲ್ಲ ರೀತಿಯ ಸಹಕಾರ ನೀಡುವದರೊಂದಿಗೆ ಹೋರಾಟದಲ್ಲಿಯೂ ಕೈ ಜೋಡಿಸಿದ್ದಾರೆ. ಈ ಬಗ್ಗೆ ಆಶಾಭಾವನೆ ಇದೆ. ಒಂದು ವೇಳೆ ಆಗದಿದ್ದಲ್ಲಿ ಎಲ್ಲ ನಿರಾಶ್ರಿತರನ್ನು ಒಂದುಗೂಡಿಸಿ ಹಾರಂಗಿ ಜಲಾಶಯದ ಎದುರಿನ ತಮಗೆ ಸೇರಿದ ಜಾಗದಲ್ಲಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ನಿರಾಶ್ರಿತರಾದ ಕೋಳಿಬೈಲು ದೇವರಾಜು, ನಾಣಯ್ಯ, ಕುಂಜಿಲನ ಪ್ರಕಾಶ್ ತಿಳಿಸಿದ್ದಾರೆ. -ಕುಡೆಕಲ್ ಸಂತೋಷ್, ಕೆ.ಕೆ. ನಾಗರಾಜ ಶೆಟ್ಟಿ