ವಿಶೇಷ ವರದಿ : ಚನ್ನನಾಯಕ
ಪೊನ್ನಂಪೇಟೆ, ಫೆ. ೯: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿಯ ಅಟ್ಟಹಾಸ ಮಿತಿಮೀರಿದ್ದು, ಮೇಯಲು ಬಿಟ್ಟಿದ್ದ ಹಸುವೊಂದು ಹುಲಿಯ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಮನಕಲಕುವ ಘಟನೆಯೊಂದು ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವಳಗೇರಿಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ
ಜ. ೩೦ರಂದು ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವಳಗೇರಿ ಗ್ರಾಮದ ಸಿ.ಕೆ. ಗಿರೀಶ್ ಎಂಬವರ ಹಾಲು ಕರೆಯುವ ಹಸುವನ್ನು ಮನೆಯ ಸಮೀಪ ಗದ್ದೆಯಲ್ಲಿ ಮೇಯಲು ಬಿಡಲಾಗಿತ್ತು. ಗದ್ದೆ ಬಯಲಲ್ಲಿ ಓಡಾಡುತ್ತ ಮೇವು ತಿನ್ನುತಿದ್ದ ಹಸು ಇನ್ನು ಸ್ವಲ್ಪ ಹೊತ್ತು ಕಳೆದಿದ್ದರೆ, ತನ್ನ ಮನೆಯನ್ನು ಸೇರಿಕೊಳ್ಳುತ್ತಿತ್ತು.
ಆದರೆ, ಅಂದು ಮಧ್ಯಾಹ್ನ ಸುಮಾರು ೩ ಗಂಟೆ ಸಮಯದಲ್ಲಿ, ಗದ್ದೆ ಬದಿಯಲ್ಲಿ ಅಡಗಿ ಕುಳಿತಿದ್ದ ಹುಲಿಯೊಂದು ಹಸುವಿನ ಬೆನ್ನಿನ ಮೇಲೆ ಕುಳಿತು, ಕುತ್ತಿಗೆಯ ಭಾಗಕ್ಕೆ ಬಲವಾಗಿ ಕಚ್ಚಿ ರಕ್ತ ಹೀರಲು ಪ್ರಯತ್ನಿಸಿದೆ. ಹಗಲು ಹೊತ್ತು ಆಗಿರುವ ಕಾರಣ ಹಾಗೂ ದೊಡ್ಡದಾದ ಗಾತ್ರ ಹೊಂದಿ ಬಲಿಷ್ಠವಾಗಿದ್ದ ಹಸು ಮೈ ಕೊಡವಿ ಹುಲಿಯನ್ನು ಬೆನ್ನ ಮೇಲಿಂದ ಬೀಳಿಸುವ ಪ್ರಯತ್ನ ಮಾಡಿದಾಗ ಹುಲಿ ಹಸುವನ್ನು ಬಿಟ್ಟು ಹೋಗಿದೆ. ಆದರೆ ಹುಲಿಯು ಬೆನ್ನಿನ ಮೇಲೆ ನೆಗೆದ ರಭಸಕ್ಕೆ ಬೆನ್ನು ಹಾಗೂ ಸೊಂಟದ ಮೂಳೆ ಹಾಗೂ ಕುತ್ತಿಗೆಯ ಭಾಗಕ್ಕೆ ತೀವ್ರ ಪೆಟ್ಟಾಗಿರುವ ಕಾರಣ ಹಸುವು ಅಲ್ಲೇ ಸಮೀಪದಲ್ಲಿದ್ದ ಸಣ್ಣ ಗುಂಡಿಯೊಳಗೆ ಕುಸಿದು ಬಿದ್ದಿದೆ.
ಸ್ವಲ್ಪ ಸಮಯದ ನಂತರ ಮನೆಯಿಂದ ಹಸು ಮೇಯಲು ಬಿಟ್ಟಿದ್ದ ಕಡೆ ಗಮನಿಸಿದಾಗ ಹಸುವು ಒಂದೇ ಜಾಗದಲ್ಲಿ ತುಂಬಾ ಹೊತ್ತಿನಿಂದ ಮಲಗಿರುವುದನ್ನು ನೋಡಿದ ಅಲ್ಲಿನ ಕೆಲಸದ ಮಹಿಳೆಯೊಬ್ಬರು ಹತ್ತಿರ ಹೋಗಿ ನೋಡಿದಾಗ ಹಸು ಹುಲಿ ದಾಳಿಗೆ ಒಳಗಾಗಿ ನರಳುತ್ತಿರುವುದು ಕಂಡು ಬಂದಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪೊನ್ನಂಪೇಟೆ ಅರಣ್ಯ ವಲಯದ ಹುದಿಕೇರಿ ಶಾಖೆಯ ಉಪ ಅರಣ್ಯಾಧಿಕಾರಿ ಗಣೇಶ್ ಶೇಟ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ನಂತರ ಜೆಸಿಬಿ ಸಹಾಯದಿಂದ ಹಸುವನ್ನು ಮನೆಗೆ ಸಾಗಿಸಿ ಆರೈಕೆ ಮಾಡಲಾಗುತ್ತಿದೆ.
ಮನಕಲಕುವ ದೃಶ್ಯ
ಹುಲಿಯಿಂದ ಗಾಯಗೊಂಡಿರುವ ಹಸುವು ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕರುವಿಗೆ ಜನ್ಮ ನೀಡಿತ್ತು.
ತನ್ನ ತಾಯಿ, ಹುಲಿಯ ದಾಳಿಗೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತ ಸಂಕಟಪಡುತ್ತ ಮಲಗಿದ್ದಾಳೆ ಎಂಬುದರ ಪರಿವೆಯೇ ಇಲ್ಲದೆ, ಹಸುವಿನ ಸುತ್ತ ಓಡಾಡುತ್ತಾ, ಹಸಿವು ಆದಾಗ ತನ್ನ ತಾಯಿಯ ಕೆಚ್ಚೆಲಿಗೆ ಬಾಯಿ ಹಾಕಿ ಕರು ಹಾಲು ಕುಡಿಯುವ ದೃಶ್ಯ ಕಲ್ಲು ಹೃದಯದವರ ಕಣ್ಣಿಂದಲೂ ಕಂಬನಿ ಮಿಡಿಯುವಂತೆ ಮಾಡುತ್ತದೆ. ಕಳೆದ ಒಂದು ವಾರದಿಂದ ಮಲಗಿದಲ್ಲೆ ಮಲಗಿರುವ ಕಾರಣ ಹಸುವು ನಿತ್ರಾಣಗೊಂಡಿದ್ದು ಹಾಲಿಲ್ಲದೆ ಕೆಚ್ಚೆಲು ಕೂಡ ಬತ್ತಿ ಹೋಗಿದೆ. ಮಲಗಿದಲ್ಲೇ ತನ್ನ ಕರುವನ್ನು ನೋಡುತ್ತಾ ಕಣ್ಣೀರಿಡುತ್ತಾ ಹಸುವು ಯಾತನೆ ಅನುಭವಿಸುತ್ತಿರುವ ದೃಶ್ಯ ಮನ ಕಲಕುವಂತಿದೆ.
ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಾ ಮಲಗಿರುವ ಹಸುವಿಗೆ ಪಶುವೈದ್ಯ ಡಾ. ಗಿರೀಶ್. ಬಿ.ಜಿ. ಚಿಕಿತ್ಸೆ ನೀಡುತ್ತಿದ್ದಾರೆ. ಎಡಿಸನ್ ಎಂಬವರು ಹಸುವಿನ ಪಾಲನೆ ಮಾಡುತ್ತಿದ್ದಾರೆ.
ಮಿತಿಮೀರಿದ ಹುಲಿಯ ಹಾವಳಿ
ಕಳೆದ ಕೆಲವು ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ಹುಲಿಯ ಹಾವಳಿ ಹೆಚ್ಚಾಗಿದ್ದು, ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಆದರೆ ಅರಣ್ಯ ಇಲಾಖೆ ಮಾತ್ರ ಕಾಡಿನಿಂದ ನಾಡಿಗೆ ಬಂದಿರುವ ಹುಲಿಯನ್ನು ಸೆರೆಹಿಡಿದು ಸಾರ್ವಜನಿಕರ ಆತಂಕವನ್ನು ನಿವಾರಿಸುವ ಪ್ರಯತ್ನಕ್ಕೆ ಇನ್ನೂ ಚಿಂತನೆ ನಡೆಸಿಲ್ಲ. ಕಳೆದ ಹಲವು ದಿನಗಳಿಂದ ಶ್ರೀಮಂಗಲ, ಟಿ. ಶೆಟ್ಟಿಗೇರಿ ಬಲ್ಯಮಂಡೂರು ಭಾಗಗಳಲ್ಲಿ ಹುಲಿಯು ಕಾಣಿಸಿಕೊಳ್ಳುತ್ತಿದ್ದು, ಕೈಗೆ ಸಿಕ್ಕ ಜಾನುವಾರುಗಳನ್ನು ಬೇಟೆಯಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಬಂದು, ಪರಿಹಾರ ಕೊಡಿಸುವ ಭರವಸೆ ನೀಡಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎನ್ನುವ ಉತ್ತರ ನೀಡುತ್ತಾ ಬರುತ್ತಿದ್ದಾರೆ.
ಕಾಡಿನಿಂದ ನಾಡಿಗೆ ಬಂದಿರುವ ಹುಲಿಗಳನ್ನು ಅರಣ್ಯ ಇಲಾಖೆ ಸೆರೆಹಿಡಿಯದೇ ಇದೇ ರೀತಿ ಮುಂದುವರೆದರೆ ಹಗಲು ಹೊತ್ತಿನಲ್ಲೇ ಕಾಣಿಸಿಕೊಳ್ಳುತ್ತಿರುವ ಹುಲಿಗಳ ದಾಳಿಗೆ ಮನುಷ್ಯರು ಬಲಿಯಾಗುವ ಸಾಧ್ಯತೆ ಇದೆ. ಕಳೆದ ೨ ವರ್ಷದ ಹಿಂದೆ ಕುಮಟೂರು, ಟಿ. ಶೆಟ್ಟಿಗೇರಿ ಮತ್ತು ಬೆಳ್ಳೂರು ಭಾಗದಲ್ಲಿ ಹುಲಿ ದಾಳಿಗೆ ಮೂವರು ಮಾನವರು ಬಲಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.