ಕಣಿವೆ, ಫೆ. ೯: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಜರುಗಿತು.
ವಿಶೇಷಚೇತನರಿಗೆ ಸಲ್ಲಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪಂಚಾಯಿತಿ ಆಡಳಿತ ಕಟಿಬದ್ಧವಾಗಿದೆ. ಸರ್ಕಾರದ ವಿವಿಧ ಇಲಾಖೆಗಳಿಂದ ದೊರಕುವ ಸವಲತ್ತುಗಳನ್ನು ಪೂರೈಸಲಾಗುತ್ತಿದೆ. ತೊರೆನೂರು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ವಿಶೇಷಚೇತನರಿಗೆ ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದರು.
ಪAಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನಾದೇವಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ೩೫ ಮಂದಿ ವಿಶೇಷಚೇತನರಿದ್ದು ಎಲ್ಲರಿಗೂ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಾಗೆಯೇ ಇನ್ನಿತರ ಸೌಲಭ್ಯಗಳ ಅಗತ್ಯವಿದ್ದಲ್ಲಿ ಪಂಚಾಯಿತಿಯ ಆಡಳಿತ ಮಂಡಳಿ ಗಮನಕ್ಕೆ ತರಬೇಕೆಂದು ಅವರು ಮನವಿ ಮಾಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಮುದಾಯ ಆರೋಗ್ಯ ಕಾರ್ಯಕರ್ತೆ ಸುನೀತಾ ಮಾಹಿತಿ ಒದಗಿಸಿದರು. ಪಂಚಾಯಿತಿ ಸದಸ್ಯರಾದ ಎಂ.ಟಿ. ಬೇಬಿ, ಟಿ.ಸಿ. ಶಿವಕುಮಾರ್, ಯಶೋಧ, ತೀರ್ಥಾನಂದ ಇದ್ದರು