ವೀರಾಜಪೇಟೆ, ಫೆ. ೯: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೂತನ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ವೀರಾಜಪೇಟೆಯ ಅಬ್ದುಲ್ ಸಲಾಂ ಆರ್.ಕೆ., ಸದಸ್ಯರಾಗಿ ವೀರಾಜಪೇಟೆಯ ಪಿ.ಜಿ. ಅಯ್ಯಪ್ಪ, ಚೆಂಬೆಬೆಳ್ಳೂರು ಗ್ರಾಮದ ಕೋಳೇರ ಟೀನಾ, ವೀರಾಜಪೇಟೆಯ ಸತೀಶ್ ಕುಮಾರ್ ವಿ.ಕೆ. ಹಾಗೂ ವೀರಾಜಪೇಟೆ ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ ಕ್ಚೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಸಮಿತಿ ರಚನೆಯಾಗಿದ್ದು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಇದರ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಕಂದಾಯ ಸಚಿವರ ಸೂಚನೆಯಂತೆ ಈಗಾಗಲೇ ಸಮಿತಿ ಮಾಡಲಾಗಿದೆ. ಇಲ್ಲಿ ನೈಜವಾದ ಫಲಾನುಭವಿಗಳನ್ನು ಗುರುತಿಸುವ ಕೆಲಸ ಆಗಬೇಕು. ವೀರಾಜಪೇಟೆ ತಾಲೂಕಿನಲ್ಲಿ ಸಾವಿರಾರು ಅರ್ಜಿಗಳು ವಿಲೇವಾರಿ ಆಗದೆ ಉಳಿದಿವೆ. ಒಂದು ವಾರದಲ್ಲಿ ಇದನ್ನು ಪರಿಶೀಲನೆ ಮಾಡಿ ಫಲಾನುಭವಿಗಳಿಗೆ ವಿತರಿಸುವ ಕೆಲಸ ಆಗಬೇಕು. ಕೂಡಲೇ ಸ್ಥಳಕ್ಕೆ ಕಂದಾಯ ನಿಗದಿಗೊಳಿಸಿ ಖಾತೆ ವರ್ಗಾವಣೆ ಮಾಡಿಕೊಡಬೇಕು. ಬಡವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಸಮಿತಿಯ ಪದಾಧಿಕಾರಿಗಳು ಕೊಟ್ಟಿರುವ ಜವಾಬ್ದಾರಿಯ ಗಾಂಭೀರ್ಯ ಅರಿತುಕೊಳ್ಳಬೇಕು ಎಂದರು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಸಲಾಂ ನನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸಿಕೊಂಡು ಹೋಗುತ್ತೇನೆ. ಬಡವರ ದೀನ ದಲಿತರ, ರೈತರ ಪರ ಇರುವ ಸರಕಾರ ನಮ್ಮದು, ಬಡವರಿಗೆ ಅನ್ಯಾಯವಾಗದ ರೀತಿಯಲ್ಲಿ, ಪ್ರತಿಯೊಬ್ಬರಿಗೂ ಸಿಗಬೇಕಾದ ಸವಲತ್ತುಗಳನ್ನು, ಭೂಮಿ ಹಕ್ಕುಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಶಾಸಕರನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಯಾವುದೇ ಕಳಂಕ ಬಾರದ ರೀತಿಯಲ್ಲಿ ಕಾರ್ಯಪ್ರವೃತ್ತರಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಮಡಿಕೇರಿ ಸಮಿತಿಯ ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ, ಬಡವರಿಗೆ, ಕೂಲಿ ಕಾರ್ಮಿಕರಿಗೆ ತಮ್ಮ ಅಂತ್ಯ ಸಂಸ್ಕಾರಕ್ಕೂ ಸ್ಥಳವಿಲ್ಲದೆ ಪರದಾಡುತ್ತಾರೆ. ಇನ್ನು ಮುಂದೆ ಅಂತಹ ಪರಿಸ್ಥಿತಿ ಯಾರಿಗೂ ಬರಬಾರದು, ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳು ಬಡವರಿಗೆ ತಲುಪುವಂತಾಗಬೇಕು. ನಮ್ಮ ಸಮಿತಿಯಿಂದ ಯಾವುದೇ ಕಳಂಕ ಬಾರದ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.

ಪೊನ್ನಂಪೇಟೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಲಾಲಾ ಅಯ್ಯಣ್ಣ ಮಾತನಾಡಿ, ತಾಲೂಕುವಾರು ಸಮಿತಿ ರಚನೆಯಾಗಿರುವುದರಿಂದ ಆಯಾಯ ತಾಲೂಕುಗಳಲ್ಲಿ ವಿಲೇವಾರಿ ಆಗದೆ ಇರುವ ಅರ್ಜಿಗಳನ್ನು ಪರಿಶೀಲಿಸಿ ಆದಷ್ಟು ಬೇಗ ಬಡವರಿಗೆ ಹಕ್ಕುಪತ್ರ ವಿತರಣೆ ಮಾಡುವ ಕೆಲಸ ಮಾಡಲಿದ್ದೇವೆ. ಎಂದರು.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಮಾತನಾಡಿ, ಶಾಸಕರ ನಿರ್ದೇಶನದಂತೆ ತ್ವರಿತವಾಗಿ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು. ಎಲ್ಲಾ ಕೆಲಸಗಳು ಆ್ಯಪ್ ಮೂಲಕ ನಡೆಯಲಿದ್ದು ಇಲ್ಲಿ ಗೊಂದಲಗಳಿಗೆ ಆಸ್ಪದವಿಲ್ಲ. ಎಲ್ಲವೂ ಪಾರದರ್ಶಕವಾಗಿ, ಕಾನೂನಾತ್ಮಕವಾಗಿ ನಡೆಯಲಿದೆ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಸುಜಾ ಕುಶಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜಿ ಪೂಣಚ್ಚ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ವೀರಾಜಪೇಟೆಯ ಪಿ.ಜಿ. ಅಯ್ಯಪ್ಪ, ಚೆಂಬೆಬೆಳ್ಳೂರು ಗ್ರಾಮದ ಕೋಳೇರ ಟೀನಾ, ವೀರಾಜಪೇಟೆಯ ಸತೀಶ್ ಕುಮಾರ್ ವಿ.ಕೆ ಇದ್ದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಡಿ.ಪಿ. ರಾಜೇಶ್, ಮತೀನ್, ಮಾಜಿ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಕಾರ್ಯದರ್ಶಿ ಶಶಿಧರನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಹಿರಿಯ ಕಾಂಗ್ರೆಸ್ ಮುಖಂಡ ಉಸ್ಮಾನ್ ಹಾಜಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.