ಕುಶಾಲನಗರ, ಫೆ. ೯: ಬಿರು ಬಿಸಿಲಿನ ನಡುವೆ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದೆ. ಫೆಬ್ರವರಿ ತಿಂಗಳ ಆರಂಭದಲ್ಲಿಯೇ ನೀರಿನ ಕೊರತೆ ಕಂಡು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಮುಂಬರುವ ನೀರಿನ ಕೊರತೆ ನೀಗಿಸಲು ಸ್ಥಳೀಯ ಆಡಳಿತ ವ್ಯವಸ್ಥೆ ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸುತ್ತಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ನದಿಯಲ್ಲಿ ನೀರಿನ ಹರಿವು ಮತ್ತು ಜಲಮೂಲಗಳು ಬತ್ತಿ ಹೋಗಲು ಪ್ರಮುಖ ಕಾರಣವಾಗಿದೆ.
ಈಗಾಗಲೇ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಕುಶಾಲನಗರ ಪುರಸಭೆಯ ಅಧಿಕಾರಿಗಳು ಕುಶಾಲನಗರ, ಮುಳ್ಳುಸೋಗೆ ಮತ್ತು ಗೊಂದಿ ಬಸವನಹಳ್ಳಿ ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗದAತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಕುಶಾಲನಗರ ಮತ್ತು ಈ ಗ್ರಾಮಗಳ ಸುಮಾರು ೩೦ ಸಾವಿರ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಹೊಣೆ ಪುರಸಭೆ ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಜವಾಬ್ದಾರಿ ಆಗಿದ್ದು ಪ್ರಸಕ್ತ ಕುಶಾಲನಗರ ಮುಳ್ಳುಸೋಗೆ ವ್ಯಾಪ್ತಿಯ ಮನೆಗಳಿಗೆ ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಮಾರ್ಚ್ ಆರಂಭದಲ್ಲಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸಂಪೂರ್ಣ ಬತ್ತಿ ಹೋಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯ ಸುಮಾರು ೨೬ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿ ಸನ್ನದ್ಧವಾಗಿರಿಸಿಕೊಳ್ಳಲಾಗಿದೆ ಎಂದು ಪುರಸಭೆಯ ಇಂಜಿನಿಯರ್ ರಂಗರಾಮ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ವ್ಯಾಪ್ತಿಯಲ್ಲಿ ಪ್ರಸಕ್ತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು ಇನ್ನೊಂದೆಡೆ ಒಳಚರಂಡಿ ಮಂಡಳಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದರೊಂದಿಗೆ ಹೆಬ್ಬಾಲೆ ಬಳಿಯ ಜಾಕ್‌ವೆಲ್‌ನಿಂದ ನೀರು ಸರಬರಾಜು ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಗ್ರಾಮದಲ್ಲಿರುವ ಕೊಳವೆಬಾವಿಯನ್ನು ದುರಸ್ತಿಗೊಳಿಸಲಾಗಿದೆ. ಯಾವುದೇ ಸಂದರ್ಭ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ರಂಗರಾಮು ಹೇಳಿದ್ದಾರೆ.
ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಒಟ್ಟು ಎರಡು ಲಕ್ಷ ಲೀಟರ್ ಪ್ರಮಾಣದ ನೀರು ಸಂಗ್ರಹ ಮಾಡುವ ಟ್ಯಾಂಕ್‌ಗಳು ಇರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಕುಶಾಲನಗರ ಪಟ್ಟಣಕ್ಕೆ ಬೈಚನಹಳ್ಳಿ ಬಳಿ ಪಂಪ್‌ಹೌಸ್ ಮೂಲಕ ನೀರು ಸರಬರಾಜು ಆಗುತ್ತಿದೆ. ನೀರಿನ ಹರಿವು ಕಡಿಮೆಯಾದ ಸಂದರ್ಭ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನು ಇಟ್ಟು ನೀರು ಸಂಗ್ರಹ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಸಕ್ತ ವಾಣಿಜ್ಯ ಬಳಕೆಗೆ ಅಥವಾ ಕಟ್ಟಡ ನಿರ್ಮಾಣಕ್ಕೆ ಕುಡಿಯುವ ನೀರು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ. ನೀರು ಪೋಲಾಗದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ಮುಖ್ಯ ಅಧಿಕಾರಿಗಳು ಪತ್ರಿಕೆ ಮೂಲಕ ಕೋರಿದ್ದಾರೆ.
- ಚಂದ್ರಮೋಹನ್