ಮಡಿಕೇರಿ, ಫೆ. ೯: ಯಾರು ಇಲ್ಲದ ಸಮಯ ಸಾಧಿಸಿ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿರುವ ಘಟನೆ ಸಂಪಾಜೆ ಗ್ರಾಮದ ಬೈಲಿನಲ್ಲಿ ಗುರುವಾರ ನಡೆದಿದೆ. ಕನ್ಯಾನ ವಿಜಯ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು, ೪೦ ಗ್ರಾಂ ಚಿನ್ನಾಭರಣ ಹಾಗೂ ಇಪ್ಪತ್ತು ಸಾವಿರ ನಗದು ದೋಚಲಾಗಿದೆ. ವಿಜಯ ಕುಮಾರ್ ಅವರ ಪತ್ನಿ ಪುಷ್ಪಲತಾ ಅವರು ಕಲ್ಲುಗುಂಡಿಯಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದು, ಬೆಳಿಗ್ಗೆ ಮನೆಗೆ ಹಾಗೂ ಗೇಟಿಗೆ ಬೀಗ ಹಾಕಿ ಪತ್ನಿಯನ್ನು ಕಲ್ಲುಗುಂಡಿಯಲ್ಲಿ ಬಿಟ್ಟು ವಿಜಯಕುಮಾರ್ ಹಾಗೂ ಅವರ ಪುತ್ರ ಚಿದ್ವಿಲಾಸ್ ಅವರು ಸುಳ್ಯದ ಖಾಸಗಿ ಬ್ಯಾಂಕ್ ಒಂದಕ್ಕೆ ಮಗ ಚಿದ್ವಿಲಾಸ್ ಅವರ ಉದ್ಯೋಗ ಸಂಬAಧಿತ ವ್ಯವಹಾರಕ್ಕಾಗಿ ತೆರಳಿದ ಸಂದರ್ಭ ಕಳ್ಳರು ಈ ಕೃತ್ಯವೆಸಗಿದ್ದಾರೆ.

ಸುಳ್ಯದಿಂದ ಸಂಜೆ ವೇಳೆಗೆ ಕಲ್ಲುಗುಂಡಿ ಪತ್ನಿಯ ಟೈಲರ್ ಶಾಪ್‌ಗೆ ಬಂದು ರಾತ್ರಿ ೭.೩೦ರ ವೇಳೆಗೆ ಮನೆಗೆ ಬರುವಾಗ ಗೇಟಿನ ಬೀಗ ತೆರೆದು ಬಾಗಿಲಿನ ಬಳಿ ಹೋದಾಗ ಚಿಲಕ ಮುರಿದಿರುವುದು ಕಂಡುಬAದಿದೆ. ಒಳಗೆ ಹೋಗಿ ನೋಡಿದಾಗ ಕಪಾಟು ಹಾಗೂ ಬೀರು ಬಾಗಿಲು ತೆರೆದಿದ್ದು, ಅದರೊಳಗಿದ್ದ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಬೀರಿನೊಳಗೆ ಇರಿಸಿದ್ದ ೨೪ ಗ್ರಾಂನ ಚಿನ್ನದ ಸರ, ಆರು ಗ್ರಾಂನ ಒಂದು ಉಂಗುರ, ತಲಾ ಮೂರು ಗ್ರಾಂ ತೂಕದ ಎರಡು

(ಮೊದಲ ಪುಟದಿಂದ) ಉಂಗುರ ಹಾಗೂ ೨೧.೫೦ ಗ್ರಾಂ ತೂಕದ ಚಿನ್ನದ ತಾಳಿ ಸರ ಸೇರಿದಂತೆ ಒಟ್ಟು ೪೦ ಗ್ರಾಂ ಚಿನ್ನಾಭರಣ ಹಾಗೂ ಇಪ್ಪತ್ತು ಸಾವಿರ ನಗದು ಕಳ್ಳತನವಾಗಿರುವುದು ತಿಳಿದು ಬಂದಿದೆ.

ಕೂಡಲೇ ವಿಜಯಕುಮಾರ್ ಅವರು ಸ್ಥಳೀಯರಿಗೆ ವಿಷಯ ತಿಳಿಸಿ, ಸಂಪಾಜೆ ಪೊಲೀಸ್ ಉಪಠಾಣೆಗೆ ಮಾಹಿತಿ ನೀಡಿದ್ದಾರೆ. ರಾತ್ರಿಯೇ ಮಡಿಕೇರಿ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ, ಅಪರಾಧ ವಿಭಾಗದ ಎಸ್.ಐ. ಶ್ರೀನಿವಾಸಲು, ಸಿಬ್ಬಂದಿ ರಮೇಶ್, ಬಸವರಾಜ್, ಮಧು, ನಾಗರಾಜ್ ಮತ್ತಿತರರು ಬಂದು ಸ್ಥಳ ತನಿಖೆ ನಡೆಸಿದರು.

ರಾತ್ರಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ. ಮನೆಯೊಳಗೆ ಹೋದ ಪೊಲೀಸ್ ಶ್ವಾನ ಅಲ್ಲಿಂದ ವಿಜಯಕುಮಾರ್ ಅವರ ಮನೆಯ ಬಲಭಾಗದಿಂದಾಗಿ ಓಡಿ ಸಮೀಪದ ದಿನಸಿ ಅಂಗಡಿಯವರೆಗೆ ಬಂದು ನಿಂತಿದೆ. ಕಳ್ಳರ ಪತ್ತೆಗೆ ಬಲೆಬೀಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.