ಪೊನ್ನಂಪೇಟೆ. ಫೆ ೯ : ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ., ಆರ್‌ಎಫ್‌ಓ ಮತ್ತು ಎಸಿಎಫ್ ಹುದ್ದೆಗಳ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತç ಪದವೀಧರರಿಗೆ ಶೇಕಡಾ ೧೦೦ ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿರುವ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸುವ ಮೂಲಕ ಕಾಲೇಜಿನ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸುತ್ತಿದ್ದಾರೆ.

ತರಗತಿಗಳನ್ನು ಬಹಿಷ್ಕರಿಸಿ ಧರಣಿ ನಡೆಸಲು ಮಂದಾದ ವಿದ್ಯಾರ್ಥಿಗಳು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ. ಎಂ. ದೇವಗಿರಿ ಅವರಿಗೆ ಈ ಬಗ್ಗೆ ಮನವಿ ಪತ್ರ ನೀಡಿದರು. ನಂತರ ಕಾಲೇಜಿನ ಮುಂಭಾಗ ಧರಣಿ ಕುಳಿತಿರುವ ಅರಣ್ಯಶಾಸ್ತç ವಿದ್ಯಾರ್ಥಿಗಳು ಸರ್ಕಾರದ ಕ್ರಮದ ಘೋಷಣೆಗಳನ್ನು ಕೂಗುತ್ತ ಸರ್ಕಾರದ ಅವೈಜ್ಞಾನಿಕ ವಿಧಾನದಿಂದ ಅರಣ್ಯ ಪದವಿ ಪಡೆದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ವೃತ್ತಿಪರ ಶಿಕ್ಷಣ ಪದವಿಗಳ ಪ್ರವೇಶಾತಿಗಾಗಿ ನಡೆಸುವ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು, ಅರಣ್ಯಶಾಸ್ತç ಪದವಿಯನ್ನು ಆಯ್ದುಕೊಂಡು ೪ ವರ್ಷಗಳ ಸತತ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳುವ ಅರಣ್ಯಶಾಸ್ತç ವಿದ್ಯಾರ್ಥಿಗಳಿಗೆ ಸರ್ಕಾರ ಅನ್ಯಾಯ ಮಾಡಬಾರದು. ಅರಣ್ಯ ಇಲಾಖೆಯ ಹುದ್ದೆಗೆ ಬಿಎಸ್ಸಿ ಅರಣ್ಯಶಾಸ್ತç ಪದವಿಯನ್ನು ಕನಿಷ್ಟ ವಿದ್ಯಾರ್ಹತೆಯನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಅರಣ್ಯಶಾಸ್ತç ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರವು ತಮ್ಮ ಬೇಡಿಕೆಗೆ ಸ್ಪಂದಿಸುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಪಟ್ಟುಹಿಡಿದಿದ್ದಾರೆ. ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.