ಎಸ್‌ಪಿ ರಾಮರಾಜನ್

ಪಾಲಿಬೆಟ್ಟ, ಫೆ. ೯: ಸಾಧಿಸುವ ಛಲ ಇದ್ದರೆ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದ್ದು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಎಸ್.ಪಿ. ಕೆ. ರಾಮರಾಜನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ದಿಡ್ಡಳ್ಳಿ ಗಿರಿಜನ ಆಶ್ರಮ ಶಾಲೆಯ ೬೦ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಂದೆ ಐದನೇ ತರಗತಿ ಓದಿದ್ದರೆ ತಾಯಿ ಶಿಕ್ಷಣದಿಂದ ದೂರ ಉಳಿದಿದ್ದರು, ಆದರೆ ನನ್ನ ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದರು. ಬಡತನದಲ್ಲಿದ್ದರೂ ಶಿಕ್ಷಣದ ಮೂಲಕ ಮುಂದೆ ಬರಬೇಕೆಂಬ ಆತ್ಮವಿಶ್ವಾಸ ನನ್ನಲ್ಲಿತ್ತು. ಹಾಗಾಗಿ ಉನ್ನತ ಶಿಕ್ಷಣ ಪಡೆದು ಎಸ್.ಪಿ. ಆಗಿ ನಿಮ್ಮ ಮುಂದೆ ಇದ್ದೇನೆ ಎಂದು ರಾಮರಾಜನ್ ಹೇಳಿದರು. ಮಕ್ಕಳು ಶಿಕ್ಷಣ ಮೂಲಕ ಮುಂದೆ ಬರಬೇಕಾದರೆ ಪೋಷಕರ ಸಹಕಾರ ಅತ್ಯಗತ್ಯ. ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳಿಸುವುದರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಧೈರ್ಯ ತುಂಬಿದಲ್ಲಿ ಮಕ್ಕಳು ಉನ್ನತ ಶಿಕ್ಷಣದ ಮೂಲಕ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು. ಈ ಸಂದರ್ಭ ಚೆನ್ನಯ್ಯನಕೋಟೆ ಗ್ರಾ.ಪಂ. ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್, ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಜೆ.ಕೆ. ಅಪ್ಪಾಜಿ, ಲಿಂಗಮ್ಮ, ಮಾಜಿ ಸದಸ್ಯೆ ಇಂದಿರಾ, ಮಾಜಿ ತಾ.ಪಂ. ಸದಸ್ಯ ಜೆ.ಕೆ. ರಾಮು, ಹಾಡಿ ಮುಖಂಡೆ ಮುತ್ತಮ್ಮ, ಆಶ್ರಮ ಶಾಲಾ ಮುಖ್ಯ ಶಿಕ್ಷಕ ಸಿದ್ದಲಿಂಗ ಶೆಟ್ಟಿ, ಸಹ ಶಿಕ್ಷಕರುಗಳಾದ ವೆಂಕಟಮೂರ್ತಿ, ಪವಿತ್ರ, ಲೋಹಿತ್, ಸಿಂಧು, ಪೂರ್ಣಿಮಾ, ವಿದ್ಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.